ನಮ್ಮನ್ನು ಬಂಧಿಸಿದ್ರೆ ಬಿಜೆಪಿಯವರಿಗೆ ಹಾಲು ಕುಡಿದಷ್ಟು ಸಂತೋಷವಾಗುತ್ತೆ:ಡಿಕೆಶಿ
ಕನಕಪುರ: ಕಾಂಗ್ರೆಸ್ ನಾಯಕರ ಮೇಕೆದಾಟು ಪಾದಯಾತ್ರೆ ಸಂಗಮದಿಂದ ದೊಡ್ಡಆಲದಹಳ್ಳಿಗೆ ಬಂದು ತಲುಪಿದೆ. ಈ ದಿನದ ಕೊನೆಯ ಮಾತುಗಳನ್ನಾಡುತ್ತಾ ಡಿಕೆಶಿ ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪಾದಯಾತ್ರೆಗೆ ಇಷ್ಟೊಂದು ಬೆಂಬಲ ಸಿಗುತ್ತೆ ಎಂದು ನಾನು ಕನಸಲ್ಲೂ ತಿಳಿದಿರಲಿಲ್ಲ. ಜನರ ಪ್ರೀತಿ, ಅಭಿಮಾನ, ಬೆಂಬಲಕ್ಕೆ ನಾನು ಸದಾ ಚಿರರುಣಿ.
ನನ್ನನ್ನು ಬಂಧಿಸಲು ಬಿಜೆಪಿಯವರು ಮತ್ತೆ ಷಡ್ಯಂತ್ರ ರೂಪಿಸುತ್ತಿದ್ದಾರೆ. ಅವರ ಷಡ್ಯಂತ್ರಕ್ಕೆಲ್ಲ ನಾನು ಹೆದರುವುದಿಲ್ಲ ಎಂದು ಕಿಡಿಕಾರಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ಮತ್ತೊಂದು ಸವಾಲೆಸೆದ ಡಿಕೆಶಿ ಕಾಂಗ್ರೆಸ್ ನಾಯಕರನ್ನು ಬಂಧನ ಮಾಡಬೇಕು ಅಂದುಕೊಂಡ್ರೆ ನಾನೇ ಲಿಸ್ಟ್ ಕಳಿಸಿಕೊಡುತ್ತೇನೆ. ಎಲ್ಲರನ್ನೂ ಬಂಧಿಸಿದರೆ ನಿಮಗೆ ಹಾಲು ಕುಡಿದಷ್ಟು ಸಂತೋಷ ಆಗುತ್ತೆ ಅಲ್ವಾ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ತಾಯ್ನಾಡಿನ ನೀರಿಗೆ ಸಹಕರಿಸದೆ ನಮ್ಮ ವಿರುದ್ಧವೇ ಪಿತೂರಿ ಮಾಡುವವರು ನಾಡದ್ರೋಹಿಗಳು ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ಕೆಂಡಾಮಂಡಲರಾದ್ರು. ನಾನು ಕನ್ನಡ ನಾಡು, ನುಡಿ, ಜನರ ಬದುಕು, ನೀರಿಗಾಗಿ ಹೋರಾಡಲು ಸದಾ ಸಿದ್ದ. ನನ್ನೆಲ್ಲಾ ನಾಡಿನ ತಾಯಂದಿರ ಪಾದಗಳಿಗೆ ಶರಣು ಎಂದ್ರು.