ಏಯ್ ಸಚಿವರೇ ನಿಂತ್ಕೊಳ್ರಿ..!; ರಾಮನಗರದಲ್ಲಿ ಸಂಸದ ಡಿ.ಕೆ.ಸುರೇಶ್ ಅಬ್ಬರಿಸಿದ್ಯಾಕೆ..?
ರಾಮನಗರ; ಇಂದು ರಾಮನಗರ ಜಿಲ್ಲಾಸ್ಪತ್ರೆ ಕಟ್ಟಡದ ಉದ್ಘಾಟನೆ ನಡೆದಿದೆ. ಈ ವೇಳೆ ಪ್ರೋಟೋಕಾಲ್ ವಿಚಾರವಾಗಿ ಗೊಂದಲ ಉಂಟಾಗಿದೆ. ಇಂದು ಇರುವ ಕಾರ್ಯಕ್ರಮಕ್ಕೆ ನಿನ್ನೆ ರಾತ್ರಿ ಆಹ್ವಾನ ನೀಡಿರುವುದಕ್ಕೆ ಸಂಸದ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮ ಸ್ಥಳದಲ್ಲೇ ಸಚಿವರಾದ ಅಶ್ವತ್ಥನಾರಾಯಣ ಹಾಗೂ ಡಾ.ಕೆ.ಸುಧಾಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೀ ಮಿನಿಸ್ಟ್ರೇ ನಿಂತುಕೊಳ್ರಿ ಎಂದ ಡಿ.ಕೆ.ಸುರೇಶ್, ಏನ್ ಸಚಿವರೇ ನಿಮಗೆ ಪ್ರೋಟೋಕಾಲ್ ಗೊತ್ತಿಲ್ಲವೇ..? ಎಂದು ಪ್ರಶ್ನಿಸಿದ್ದಾರೆ. ನಾನೂ ಇಲ್ಲಿ ಸಂಸದ ನನಗೂ ಪ್ರೋಟೋಕಾಲ್ ಇದೆ ಎಂದು ಹೇಳಿದ್ದಾರೆ.
ಒಬ್ಬ ಉಸ್ತುವಾರಿ ಸಚಿವರಾಗಿ, ಮಾಜಿ ಡಿಸಿಎಂ ಆಗಿ ಏನು ಸೂಚನೆ ಕೊಡಬೇಕು ಅನ್ನೋದು ನಿಮಗೆ ಗೊತ್ತಿಲ್ಲವೇ ಎಂದು ಸಚಿವ ಅಶ್ವತ್ಥನಾರಾಯಣ್ ಅವರಿಗೆ ಡಿ.ಕೆ.ಸುರೇಶ್ ತರಾಟೆಗೆ ತೆಗೆದುಕೊಂಡರು. ಈ ವೇಳೆ ಸಚಿವ ಅಶ್ವತ್ಥನಾರಾಯಣ್ ಅವರು ಜಗಳ ಆಡುವುದು ಬೇಕಿಲ್ಲ, ಬನ್ನಿ ಮಾತಾಡೋಣ ಎಂದರು. ಇದರಿಂದ ಡಿ.ಕೆ.ಸುರೇಶ್ ಮತ್ತಷ್ಟು ಸಿಟ್ಟಾದರು. ಇನ್ನು ಕಾರ್ಯಕ್ರಮವನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ಕೂಡಾ ಪ್ರತಿಭಟನೆ ನಡೆಸಿದರು. ಕುಮಾರಸ್ವಾಮಿಯವರು ಬರುವ ಮೊದಲೇ ಸಚಿವ ಸುಧಾಕರ್ ಅವರು ಉದ್ಘಾಟನೆ ನೆರವೇರಿಸಿದ್ದರು. ಅದಕ್ಕೆ ಜೆಡಿಎಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರ ಬಂದ ಕುಮಾರಸ್ವಾಮಿಯವರು ನಾನೇ ಹೇಳಿದ್ದು ಲೇಟಾಗುತ್ತೆ ಉದ್ಘಾಟನೆ ಮುಗಿಸಿಬಿಡಿ ಎಂದು ಹೇಳುವ ಮೂಲಕ ಗೊಂದಲಕ್ಕೆ ತೆರೆ ಎಳೆದರು.
ಈ ಹಿಂದೆ ಕೂಡಾ ಕಾರ್ಯಕ್ರಮವೊಂದರಲ್ಲೇ ಡಿ.ಕೆ.ಸುರೇಶ್ ಹಾಗೂ ಸಚಿವ ಅಶ್ವತ್ಥನಾರಾಯಣ ವಾಗ್ದಾದ ನಡೆಸಿದ್ದರು. ಅಶ್ವತ್ಥನಾರಾಯಣ್ ಅವರು ಯಾವನ್ ರೀ ಗಂಡಸು ಎಂದು ಅಂದಿದ್ದಕ್ಕೆ ಡಿ.ಕೆ.ಸುರೇಶ್ ಸಿಟ್ಟಿಗೆದ್ದು ಜಗಳಕ್ಕಿಳಿದಿದ್ದರು.