ಚಪ್ಪಲಿ, ಬನಿಯನ್ನಲ್ಲಿ ಸಿಕ್ತು ಪೇಸ್ಟ್ ರೂಪದಲ್ಲಿದ್ದ ಚಿನ್ನ..!
ಮಂಗಳೂರು; ದುಬೈನಿಂದ ಪೇಸ್ಟ್ ರೂಪದಲ್ಲಿ ಚಿನ್ನ ತಂದಿದ್ದ ಆರೋಪಿಗಳು ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳ ಪರಿಶೀಲನೆ ವೇಳೆ ಚಿನ್ನ ಪತ್ತೆಯಾಗಿದ್ದು ಎರಡು ಪ್ರಕರಣಗಳಲ್ಲಿ ಒಟ್ಟು 55.39 ಲಕ್ಷ ರೂ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಸೆ.5 ರಂದು ದುಬೈನಿಂದ ಆಗಮಿಸಿದ ನಾಲ್ವರು ಪ್ರಯಾಣಿಕರ ಬಳಿ ಪೇಸ್ಟ್ ರೂಪದಲ್ಲಿ ಅಕ್ರಮ ಚಿನ್ನ ಪತ್ತೆಯಾಗಿತ್ತು. ಎರಡು ಜೊತೆ ಚಪ್ಪಲಿಯಲ್ಲಿ ಮುಚ್ಚಿಟ್ಟಿರುವ ಕಪ್ಪು ಬಣ್ಣದ ಪ್ಯಾಕೆಟ್ಗಳು ಮತ್ತು ಪ್ರಯಾಣಿಕರು ಧರಿಸಿರುವ ಡಬಲ್ ಲೇಯರ್ಡ್ ಬನಿಯನ್ ತುಂಬಾ ತೆಳುವಾಗಿ ಪೇಸ್ಟ್ ರೂಪದಲ್ಲಿ ಚಿನ್ನ ಪತ್ತೆಯಾಗಿದೆ. ಇವರಿಂದ 45,65,730 ರೂಪಾಯಿ ಮೌಲ್ಯದ ಒಟ್ಟು 897.00 ಗ್ರಾಂ ತೂಕದ 24 ಕ್ಯಾರೆಟ್ ಶುದ್ಧವಾದ 3 ಆಯತಾಕಾರದ ಚಿನ್ನದ ಬಾರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸೆ.6 ರಂದು ಕೇರಳದ ಕಾಸರಗೋಡು ಮೂಲದ ಪ್ರಯಾಣಿಕನಿಂದ ರೂ 9,74,080 ಮೌಲ್ಯದ 190.250 ಗ್ರಾಂ 24 ಕ್ಯಾರೆಟ್ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈತ ದುಬೈನಿಂದ ಏರ್ ಇಂಡಿಯಾ ಫ್ಲೈಟ್ ಮೂಲಕ ಮಂಗಳೂರಿಗೆ ಆಗಮಿಸಿದ್ದ. ಚಿನ್ನವನ್ನು ಕಾರ್ಟನ್ ಬಾಕ್ಸ್ನಲ್ಲಿ ಅಡಗಿಸಿ ಸಾಗಣೆ ಮಾಡುತ್ತಿರುವುದು ತನಿಖೆ ಮೂಲಕ ತಿಳಿದಿದೆ.