ಪಿಎಸ್‌ಐ ನೇಮಕಾತಿ ಅಕ್ರಮ; ಕೈಗಾರಿಕಾ ಭದ್ರತಾ ಪಡೆ ಪಿಎಸ್‌ಐ ವಶಕ್ಕೆ
ಕಲಬುರಗಿ: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆ ಮತ್ತಷ್ಟು ವೇಗ ಪಡೆದುಕೊಂಡಿದೆ. ಸಿಐಡಿ ಬಲೆಗೆ ಹಲವಾರು ಆರೋಪಿಗಳು ಸಿಕ್ಕಿಬೀಳುತ್ತಲೇ ಇದ್ದಾರೆ. ಅನುಮಾನದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಕೈಗಾರಿಕಾ ಭದ್ರತಾ ಪಡೆಯ ಪಿಎಸ್ಐ ಯಶವಂತ ಗೌಡರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಎಸ್ಐ ಆಗಿ ಆಯ್ಕೆಯಾಗಿ ಯಶವಂತಗೌಡ, ಪ್ರಸ್ತುತ ಕಲಬುರಗಿಯ ನಾಗನಹಳ್ಳಿಯ ಪೊಲೀಸ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದರು. ಅವರ ಮೇಲೂ ಅನುಮಾನಗಳಿದ್ದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ವಿಚಾರನೆ ನಡೆಸಲಾಗುತ್ತಿದೆ. ಯಶವಂತಗೌಡ ಅವರು, ಬೆಂಗಳೂರಿನ ಕೇಂದ್ರದಲ್ಲಿ ಪರೀಕ್ಷೆ ಬರೆದು ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಪಾಸಾಗಿದ್ದರು. ಪಾಸಾದ ಬಗ್ಗೆ ಅನುಮಾನಗೊಂಡಿದ್ದ ಸಿಐಡಿ ಅಧಿಕಾರಿಗಳಿಗೆ ಯಶವಂತ ಗೌಡ ಏಪ್ರಿಲ್ 22ರಂದು ದಾಖಲೆಗಳನ್ನು ಸಲ್ಲಿಸಿ ತರಬೇತಿ ಕೇಂದ್ರಕ್ಕೆ ವಾಪಸಾಗಿದ್ದರು. ಆದ್ರೆ ಅವರ ಮೇಲೆ ಮತ್ತಷ್ಟು ಅನುಮಾನಗಳ ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಯಶವಂತ ಗೌಡ ಅವರನ್ನು ವಶಕ್ಕೆ ಪಡೆಯಲಾಗಿದೆ. ಕಲಬುರಗಿಯಲ್ಲಿ ಕೆಲಕಾಲ ವಿಚಾರಣೆ ನಂತರ ಅವರನ್ನು ಬೆಂಗಳೂರಿಗೆ ಕರೆದೊಯ್ಯಲಾಯಿತು.