ಶಾಲಾ ಕೊಠಡಿಗಳ ಬಣ್ಣ ಕೇಸರಿ ಆದರೆ ತಪ್ಪೇನು..?; ಸಿಎಂ ಬೊಮ್ಮಾಯಿ ಪ್ರಶ್ನೆ
ಕಲಬುರಗಿ; ರಾಜ್ಯಾದ್ಯಂತ ವಿವೇಕ ಹೆಸರಿನ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಶಾಲೆಗಳಲ್ಲಿ ವಿವೇಕಾನಂದ ಹೆಸರಿನಲ್ಲಿ ಕೊಠಡಿಗಳನ್ನು ನಿರ್ಮಾಣ ಮಾಡುವುದು ಕೇಸರೀಕರಣ ಹೇಗೆ ಆಗುತ್ತೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನೆ ಮಾಡಿದ್ದಾರೆ. ವಿವೇಕ ಯೋಜನೆ ಹೆಸರಿನಲ್ಲಿ ಶಾಲೆಗಳಲ್ಲಿ ಕೇಸರೀಕರಣ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಉತ್ತರ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ನೂತನ ಕೊಠಡಿಗಳು ಕೇಸರಿ ಬಣ್ಣದಲ್ಲಿ ಇದ್ದರೆ ತಪ್ಪೇನು? ಎಂದು ಪ್ರಶ್ನಿಸಿದ್ದಾರೆ.
ಮಡಿಹಾಳ ಗ್ರಾಮದಲ್ಲಿ ವಿವೇಕ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಸಿಎಂ ಬೊಮ್ಮಾಯಿ ಮಾತನಾಡಿದರು. ರಾಜ್ಯದಲ್ಲಿ ಹಲವಾರು ಕಡೆ ಶಾಲಾ ಕೊಠಡಿಗಳು ಶಿಥಿಲಗೊಂಡಿವೆ. ಕಟ್ಟಡಗಳು ಹಳೆಯದಾಗಿವೆ. ಹೀಗಾಗಿ ರಾಜ್ಯ ಸರ್ಕಾರದಿಂದ 7601 ಶಾಲೆ ಹಾಗೂ ಕಾಲೇಜುಗಳ ಕೊಠಡಿಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಸ್ವಾಮಿ ವಿವೇಕಾನಂದರು ಖಾವಿ ಧರಿಸುತ್ತಿದ್ದರು. ರಾಷ್ಟ್ರಧ್ವಜದಲ್ಲಿರುವ ಒಂದು ಬಣ್ಣ ಕೂಡಾ ಕೇಸರಿ, ಹೀಗಿದ್ದ ಮೇಲೆ ಶಾಲೆಗಳ ನೂತನ ಕೊಠಡಿಗಳು ಕೇಸರಿ ಬಣ್ಣದಲ್ಲಿ ಇದ್ದರೆ ಏನು ತಪ್ಪು ಎಂದು ಸಿಎಂ ಪ್ರಶ್ನೆ ಮಾಡಿದ್ದಾರೆ.