Districts

ಚಾಮುಂಡಿ ಬೆಟ್ಟಕ್ಕಿಲ್ಲ ರೋಪ್‌ ವೇ; ಜಿಲ್ಲಾಡಳಿತ ಈ ನಿರ್ಧಾರಕ್ಕೆ ಕಾರಣವೇನು..?

ಮೈಸೂರು; ನಂದಿ ಬೆಟ್ಟಕ್ಕೆ ರೋಪ್‌ ವೇ ನಿರ್ಮಾಣಕ್ಕೆ ಸರ್ಕಾರ ಗ್ರೀನ್‌ ಸಿಗ್ನಲ್‌ ನೀಡಿದೆ. ಅದರಂತೆ ಚಾಮುಂಡಿ ಬೆಟ್ಟಕ್ಕೂ ರೋಪ್‌ ವೇ ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿತ್ತು. ಆದ್ರೆ ಆ ನಿರ್ಧಾರವನ್ನು ಮೈಸೂರು ಜಿಲ್ಲಾಡಳಿತ ಕೈಬಿಟ್ಟಿದೆ. ಚಾಮುಂಡಿ ಬೆಟ್ಟಕ್ಕೆ ರೋಪ್‌ ವೇ ನಿರ್ಮಾಣ ಮಾಡುವುದಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ. 

ಪ್ರವಾಸೋದ್ಯಮವನ್ನು ಉತ್ತೇಜಿಸಲು 2022-2023 ನೇ ಸಾಲಿನ ಬಜೆಟ್ ನಲ್ಲಿ ಚಾಮುಂಡಿ ಬೆಟ್ಟ, ಮುಳ್ಳಯ್ಯನಗಿರಿ, ನಂದಿಬೆಟ್ಟದಲ್ಲಿ ರೋಪ್ ವೇ ನಿರ್ಮಾಣ ಮಾಡುವುದಾಗಿ ಘೋಷಿಸಲಾಗಿತ್ತು.  ಇದರಿಂದ ಪ್ರವಾಸೋದ್ಯಮಕ್ಕೆ ಬೂಸ್ಟ್ ನೀಡಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದರು. ಆದ್ರೆ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಿಸುವುದಕ್ಕೆ  ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೋಪ್ ವೇ ನಿರ್ಮಿಸುವ ವಿಚಾರವನ್ನು ಜಿಲ್ಲಾಡಳಿತ ಕೈ ಬಿಟ್ಟಿದೆ.

ಈ ಕುರಿತಂತೆ ಮೈಸೂರಿನಲ್ಲಿ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಎಸ್.ಟಿ. ಸೋಮಶೇಖರ್, ಚಾಮುಂಡಿ ಬೆಟ್ಟ ಪ್ರವಾಸಿ ಸ್ಥಳ ಆಗುವುದಕ್ಕಿಂತ ಅದು ಪವಿತ್ರ ಧಾರ್ಮಿಕ ಸ್ಥಳವಾಗಬೇಕು. ಬೆಟ್ಟಕ್ಕೆ ಪ್ರವಾಸಿಗರು ಧಾರ್ಮಿಕ ಭಾವನೆಯಿಂದ ಬರುತ್ತಾರೆ. ಈ ಸ್ಥಳವನ್ನು ಮತ್ತೊಂದು ಪ್ರವಾಸಿ ಸ್ಥಳವನ್ನಾಗಿ ನೋಡುವುದು ಬೇಡ ಎನ್ನುವುದು ಸರ್ವರ ಅಭಿಪ್ರಾಯವಾಗಿದೆ. ಬೆಟ್ಟಕ್ಕೆ ಹೋಗಲು ರಸ್ತೆ ಮಾರ್ಗವಿದೆ. ಮೆಟ್ಟಿಲುಗಳಿವೆ. ಇಷ್ಟೇ ಸಾಕು, ರೋಪ್ ವೇ ಬೇಡ ಎಂದಿದ್ದಾರೆ.  ಹೀಗಾಗಿ ಎಲ್ಲರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ರೋಪ್ ವೇ ನಿರ್ಮಾಣದ ನಿರ್ಧಾರವನ್ನು ಬಿಟ್ಟಿದ್ದೇವೆ ಎಂದು ಹೇಳಿದ್ದಾರೆ.

 

Share Post