Districts

ಬುರ್ಖಾ ಧರಿಸಿ ಬಂದ ಯುವಕ; ಆಲಮಟ್ಟಿ ಜಲಾಶಯ ಪ್ರವೇಶಿಸಲು ಪ್ರಯತ್ನಿಸಿದ್ದೇಕೆ..?

ವಿಜಯಪುರ; ಬುರ್ಖಾ ಧರಿಸಿ ಬಂದ ಯುವಕನೊಬ್ಬ ಬೆಳ್ಳಂಬೆಳಗ್ಗೆ ಆಲಮಟ್ಟಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಲಾಶಯ ಪ್ರವೇಶಿಸಲು ಯತ್ನಿಸಿರುವ ಘಟನೆ ನಡೆದಿದೆ. ಸದ್ಯ ಆ ಯುವಕನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಇಂದು ಮುಂಜಾನೆ ಆಲಮಟ್ಟಿ ಪರಿಸರದಲ್ಲಿ ಬುರ್ಖಾ ಧರಿಸಿದ ಯುವಕ ಕಾಣಿಸಿಕೊಂಡಿದ್ದಾನೆ. ಆತ ಇದ್ದಕ್ಕಿದ್ದಂತೆ ಜಲಾಶಯ ಪ್ರವೇಶ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಭದ್ರತೆಗೆ ಇದ್ದ ಪೊಲೀಸರು ಆತನನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮಾತನಾಡುವಾಗ ಬುರ್ಖಾ ಧರಿಸಿರುವುದು ಮಹಿಳೆಯಲ್ಲ, ಯುವಕ ಎಂಬುದು ಪೊಲೀಸರಿಗೆ ಗೊತ್ತಾಗಿದೆ. ಕೂಡಲೇ ಎಚ್ಚೆತ್ತ ಆಗ ಅಲ್ಲಿಂದ ಕಾಲ್ಕಿತ್ತು, ನಂತರ ಹುಡುಗನ ವೇಷದಲ್ಲೇ ಡ್ಯಾಂ ಕಡೆ ಬಂದಿದ್ದಾನೆ. ಇದ್ರಿಂದ ಅನುಮಾನಗೊಂಡ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಯುವಕನ ಬಳಿ ಇದ್ದ ಬ್ಯಾಗ್‌ನಲ್ಲಿ ಮಹಿಳೆಯರ ಬಟ್ಟೆಗಳು, ಲಿಪ್ ಸ್ಟಿಕ್, ನೈಲ್ ಪಾಲಿಶ್ ಮುಂತಾದವು ಪತ್ತೆಯಾಗಿವೆ. ಸದ್ಯ ಪೊಲೀಸ್ ವಶದಲ್ಲಿರುವ ಯುವಕ ತನ್ನ ಹೆಸರು ಕಿಶೋರ್ (22) ಎಂದು ಹೇಳಿಕೊಂಡಿದ್ದು, ಹಾಸನದ ನಿವಾಸಿಯಂತೆ. ಹಾಸನದಲ್ಲಿ ಬೇಕರಿ ಅಂಗಡಿ ಹೊಂದಿರುವುದಾಗಿ ಹೇಳಿರುವ ಆತ, ದೈಹಿಕವಾಗಿ ತನ್ನಲ್ಲಿ ಮಹಿಳಾತನ ಪರಿವರ್ತನೆ ಆಗುತ್ತಿದೆ. ಈ ಕಾರಣದಿಂದಾಗಿ ಹುಡುಗಿಯರ ಬಟ್ಟೆ ಧರಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ.

ಹೆತ್ತವರು ತನಗೆ ಮದುವೆ ಮಾಡಲು ವಧು ಹುಡುಕುತ್ತಿದ್ದಾರೆ. ಆದರೆ, ನಾನು ತೃತೀಯ ಲಿಂಗಿಯಾಗಿ ಪರಿವರ್ತನೆ ಹೊಂದುತ್ತಿರುವೆ. ನನಗೆ ಮದುವೆ ಬೇಡ ಎಂದರೂ ಒತ್ತಡ ಹೇರುತ್ತಿರುವ ಕಾರಣ ಮನೆ ತೊರೆದು ಬಂದಿರುವುದಾಗಿ ಹೇಳಿಕೊಂಡಿದ್ದಾನೆ. ಆದರೂ ಯುವಕ ಹಾಸನದಿಂದ ಆಲಮಟ್ಟಿಗೆ ಬಂದದ್ದು ಏಕೆ, ನಸುಕಿನಲ್ಲೇ ಜಲಾಶಯ ಪ್ರವೇಶಕ್ಕೆ ಯತ್ನಿಸಿದ್ದು ಏಕೆ ಎಂದೆಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

Share Post