ಏಪ್ರಿಲ್ 1ರ ನಂತರ ರಾಜ್ಯ ಪ್ರವಾಸ – 140 ಸ್ಥಾನ ಗೆಲ್ಲುವ ಗುರಿ; ಮಾಜಿ ಸಿಎಂ ಯಡಿಯೂರಪ್ಪ
ಮೈಸೂರು; ಅವಧಿಗೆ ಮುನ್ನ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಬಗ್ಗೆ ಸದ್ಯಕ್ಕೆ ಯಾವುದೇ ಲಕ್ಷಣಗಳಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಮೈಸೂರಿನ ಸುತ್ತೂರು ಮಠದಲ್ಲಿ ಮಾತನಾಡಿದ ಅವರು, ಏಪ್ರಿಲ್ 1 ರ ನಂತರ ನಾವು ರಾಜ್ಯ ಪ್ರವಾಸ ಕೈಗೊಳ್ಳಲಿದ್ದೇವೆ. ನಾಲ್ಕು ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡಿ, ಬಿಜೆಪಿ ಪಕ್ಷದ ಸಂಘಟನೆ ಮಾಡಲಾಗುತ್ತದೆ ಎಂದು ಹೇಳಿದರು.
ಅಮಿತ್ ಶಾ ಅವರು ರಾಜ್ಯಕ್ಕೆ ಬರುತ್ತಿದ್ದಾರೆ. ಅವರು ಬಂದ ನಂತರ ಅವಧಿಪೂರ್ವ ಚುನಾವಣೆಯಾಗುತ್ತದೆ ಎಂದು ಕೆಲವರು ಹೇಳುತ್ತಿರುವ ಬಗ್ಗೆ ಉತ್ತರಿಸಿದ ಯಡಿಯೂರಪ್ಪ ಅವರು, ಆ ಬಗ್ಗೆ ನನಗೆ ಗೊತ್ತಿಲ್ಲ. ಅಂತಹ ಬೆಳವಣಿಗೆಗಳೇನಾದರೂ ಇದ್ದರೆ ಮುಂದೆ ತಿಳಿಸುವೆ ಎಂದಿದ್ದಾರೆ. ನಾನು ರಾಜ್ಯದ ಜನತೆಗೆ ಹಲವಾರು ಭರವಸೆಗಳನ್ನು ನೀಡಿದ್ದೆ. ಅವುಗಳನ್ನು ಈಗಿನ ಸಿಎಂ ಬಸವರಾಜ ಬೊಮ್ಮಾಯಿ ಈಡೇರಿಸುತ್ತಿದ್ದಾರೆ. ಬೊಮ್ಮಾಯಿ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಮುಂಬರುವ ಚುನಾವಣೆಯಲ್ಲಿ ನಾವು 140 ಸ್ಥಾನ ಗೆಲ್ಲುವುದು ನಿಶ್ಚಿತ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.