ಅಶ್ಲೀಲ ವಿಡಿಯೋ ತಯಾರಿಸಿ ಬಿಜೆಪಿ ಕಾರ್ಯಕರ್ತೆಗೆ ಬ್ಲ್ಯಾಕ್‌ಮೇಲ್
ಬಾಗಲಕೋಟೆ; ಬಿಜೆಪಿ ಕಾರ್ಯಕರ್ತೆಯೊಬ್ಬರ ಅಶ್ಲೀಲ ವಿಡಿಯೋ ತಯಾರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿರುವ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ನಡೆದಿದೆ.
ಖಾಸಗಿ ಶಾಲೆಯ ಶಿಕ್ಷಕಿಯೂ ಆಗಿರುವ ಬಿಜೆಪಿ ಕಾರ್ಯಕರ್ತೆಯೊಬ್ಬಳಿಗೆ ವಿಡಿಯೋವೊಂದನ್ನು ತೋರಿಸಿ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ. ಮಹಿಳೆಯ ಫೋಟೋ ಒಂದರ ಕಣ್ಣಿಗೆ ಕಪ್ಪು ಪಟ್ಟಿ ಹಾಕಿ, ಎಡಿಟ್ ಮಾಡಿ ಅಶ್ಲೀಲ ವಿಡಿಯೋ ತಯಾರಿಸಲಾಗಿದೆ. ಅದು ಬಿಜೆಪಿ ಕಾರ್ಯಕರ್ತೆಯ ವಿಡಿಯೋ ಎಂದು ಬಿಂಬಿಸಲಾಗುತ್ತಿದೆ.
ಈ ವಿಚಾರವಾಗಿ ಬಂದೆನವಾಜ್ ಸರಕಾವಸ್ ಎಂಬಾತ, ನಾನು ಖಾಸಗಿ ಸುದ್ದಿವಾಹಿನಿ ವರದಿಗಾರ ಎಂದು ಹೇಳಿಕೊಂಡು ಮಹಿಳೆಗೆ ಕರೆ ಮಾಡಿದ್ದಾನೆ. ನನ್ನ ಬಳಿ ನಿಮ್ಮ ರಾಸಲೀಲೆ ವೀಡಿಯೋ ಇದೆ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎನ್ನಲಾಗಿದೆ.
ಜೊತೆಗೆ ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ಕೊಡದಿದ್ದರೆ ವಿಡಿಯೋ ವೈರಲ್ ಮಾಡೋದಾಗಿ ಆತ ಹೇಳಿದ್ದಾನೆ,. ಈ ಬಗ್ಗೆ ಜಮಖಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.