ಪ್ರವೀಣ್ ಹತ್ಯೆಗೆ ಖಂಡನೆ; ಬಿಜೆಪಿ ಯುವ ಮೋರ್ಚಾ ಮುಖಂಡರ ರಾಜೀನಾಮೆ, ಹಲವೆಡೆ ಪ್ರತಿಭಟನೆ
ಚಿಕ್ಕಮಗಳೂರು; ಹಿಂದೂ ಸಂಘಟನೆ ಮುಖಂಡ ಪ್ರವೀಣ್ ನೆಟ್ಟಾರು ಹಂತಕರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ, ಚಿಕ್ಕಮಗಳೂರು ಜಿಲ್ಲೆಯ 9 ಮಂಡಲಗಳ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂದೀಪ್ ಹರಿವಿನಗಂಡಿ ಸಹಿತ ಎಲ್ಲ ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದ್ದಾರೆ.
ಪ್ರವೀಣ್ ಸಾವು ಹಿಂದೂ ಸಮಾಜಕ್ಕೆ ತುಂಬಲಾರದ ನಷ್ಟ. ರಾತ್ರಿ ಸಮಯದಲ್ಲಿ ಹಿಂದಿನಿಂದ ಬಂದು ಹೊಡೆದಿರುವುದು ಹೇಡಿಗಳ ಕೃತ್ಯವಾಗಿದೆ. ಬಿಜೆಪಿ ಯುವ ಮೋರ್ಚಾದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ತೊಡಗಿಸಿಕೊಂಡಿದ್ದ ಹುಡುಗ ಸಮಾಜಕ್ಕಾಗಿ ಪ್ರಾಣ ತೆತ್ತಿರುವುದು ದುರ್ದೈವದ ಸಂಗತಿ. ಆರೋಪಿಗಳನ್ನು ಬಂಧಿಸಿ ಉಗ್ರ ಶಿಕ್ಷೆ ವಿಧಿಸಬೇಕು. ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು. ಹಿಂದೆ ನಡೆದ ಕೊಲೆಗಳಿಗೆ ಯಾವ ರೀತಿ ನ್ಯಾಯ ಸಿಕ್ಕಿದೆ ಎನ್ನುವುದು ನಮ್ಮ ಕಣ್ಣ ಮುಂದಿದೆ. ಕಠಿಣ ಕ್ರಮ ಎನ್ನುವುದು ಭರವಸೆಯಾಗೇ ಉಳಿದಿದೆ. ಹೀಗಾಗಿ ಜಿಲ್ಲಾ ಯುವ ಮೋರ್ಚಾ ಎಲ್ಲ ಪದಾಧಿಕಾರಿಗಳು, 9 ಮಂಡಲಗಳ ಅಧ್ಯಕ್ಷರು ಪಕ್ಷದ ಜವಾಬ್ದಾರಿಗೆ ರಾಜೀನಾಮೆ ನೀಡಿದ್ದೇವೆ ಎಂದು ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂದೀಪ್ ಹರಿವಿನಗಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು ಗದಗ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವೀಣ್ ಹತ್ಯೆ ವಿರೋಧಿಸಿ ಹಿಂದೂ ಪರ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.