ಬ್ಯಾಂಕ್ ಅಧಿಕಾರಿಗಳಿಂದಲೇ ಕೋಟಿ ಕೋಟಿ ಹಣಕ್ಕೆ ಕನ್ನ; ದೂರು ದಾಖಲು
ಬೆಳಗಾವಿ; ನಕಲಿ ದಾಖೆಲೆಗಳನ್ನು ಸೃಷ್ಟಿಸಿ ಬ್ಯಾಂಕ್ ಅಧಿಕಾರಿಗಳೇ ಬ್ಯಾಂಕ್‌ನಿಂದ ಕೋಟಿ ಕೋಟಿ ಲೂಟಿ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ ನಡೆದಿದೆ. ಇಲ್ಲಿನ ಕರ್ನಾಟಕ ವಿಕಾಸ ಗ್ರಾಮೀಣ (ಕೆವಿಜಿ) ಬ್ಯಾಂಕಿನ ಶಾಖೆಯಲ್ಲಿ 1.73 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಅಕ್ರಮವಾಗಿ ಬ್ಯಾಂಕ್ ನೌಕರರೇ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಶಾಖಾ ವ್ಯವಸ್ಥಾಪಕ ಸೇರಿ ಆರು ಮಂದಿ ಸಿಬ್ಬಂದಿ ವಿರುದ್ಧ ದೂರು ದಾಖಲಿಸಲಾಗಿದೆ.
ಸ್ಥಿರ ಠೇವಣಿ ಮೇಲೆ ಸಾಲ ಪಡೆಯಲು ನಕಲಿ ದಾಖಲೆ ಸೃಷ್ಟಿ ಮಾಡಿ 21 ಮಂದಿ ಹಣವನ್ನು ಲಪಟಾಯಿಸಲಾಗಿದೆ ಎಂದು ತಿಳಿದುಬಂದಿದೆ. ಒಟ್ಟು 1,73,50,000 ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಧಿಕಾರ ದುರುಪಯೋಗ ಮಾಡಿಕೊಂಡು ಬ್ಯಾಂಕಿಗೆ ಆರ್ಥಿಕ ಹಾನಿಯುಂಟುಮಾಡಿರುವ ಆರೋಪದ ಮೇಲೆ ಪೊಲೀಸರಿಗೆ ಹಿರಿಯ ಅಧಿಕಾರಿಗಳು ದೂರು ನೀಡಿದ್ದಾರೆ. ಕೆವಿಜಿ ಬ್ಯಾಂಕಿನ ಗೋಕಾಕ್ ಕಚೇರಿ ಸಹಾಯಕ ಮಲ್ಲಿಕಾರ್ಜುನ ಶಿರಗಾಂವಿಗೇ ಈ ಪ್ರಕರಣದ ಪ್ರಮುಖ ಆರೋಪಿ ಎಂದು ತಿಳಿದುಬಂದಿದೆ. ಹುಕ್ಕೇರಿ ಶಾಖಾ ವ್ಯವಸ್ಥಾಪಕ ಸತ್ಯಬ್ರತ ಸಾಹು, ಸಹಾಯಕ ವ್ಯವಸ್ಥಾಪಕಿ ಗಾಯತ್ರಿ ಸಿ.ಪುನ್ನೂರಿ, ತುಮ್ಮಳ ಎಸ್.ಜಿ.ವಿ ರಮೇಶ, ಸಹಾಯಕರಾದ ಸಂತೋಷ ಎ. ಶಿವನಾಯಕ ಹಾಗೂ ಪ್ರೀತಿಕುಮಾರಿ ಝಾ ವಿರುದ್ಧ ದೂರು ದಾಖಲಿಸಲಾಗಿದೆ.