ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹೆಚ್ಚುವರಿ 5 ಸಾವಿರ ಕೋಟಿ; ಸಿಎಂ ಬೊಮ್ಮಾಯಿ ಘೋಷಣೆ
ಕಲಬುರಗಿ; ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಮುಂದಿನ ಬಜೆಟ್‌ನಲ್ಲಿ ಕೆಕೆಆರ್‌ಡಿಬಿಗೆ ನೀಡಲಿರುವ 3 ಸಾವಿರ ಕೋಟಿ ರೂಪಾಯಿಯ ಜೊತೆಗೆ ಹೆಚ್ಚುವರಿಯಾಗಿ 5 ಸಾವಿರ ಕೋಟಿ ರೂಪಾಯಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಕಲಬುರಗಿಯಲ್ಲಿ ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
3 ಸಾವಿರ ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿದ ಸಿಎಂ, ಈ ಭಾಗದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಬದ್ಧವಾಗಿದೆ. ಮಾರ್ಚ್ 31ರೊಳಗಾಗಿ ಈ ಭಾಗದ 5 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಮಾಡಲಾಗುವುದು. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 11 ಸಾವಿರ ಹುದ್ದೆಗಳನ್ನೂ ಮಾರ್ಚ್ ಅಂತ್ಯದೊಳಗೆ ಭರ್ತಿ ಮಾಡಲಾಗುವುದು ಎಂದು ಘೋಷಿಸಿದರು. ನಾರಾಯಣಪುರ ಬಲದಂಡೆ ಯೋಜನೆಯ ಕಾಲುವೆಗಳು ಹಾಳಾಗಿದ್ದು, ಕೊನೆಯವರೆಗೂ ನೀರು ತಲುಪುತ್ತಿಲ. ಕಾಲುವೆಗಳ ಸುಧಾರಣೆಗೆ ಅಗತ್ಯವಾದ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.