ಬಾರ್‌ಗೆ ನುಗ್ಗಿ ಮಾರಕಾಸ್ತ್ರಗಳಿಂದ ವ್ಯಕ್ತಿ ಮೇಲೆ ದಾಳಿ
ಮೈಸೂರು: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಯುವಕರ ಗುಂಪೊಂದು ಹಾಡುಹಗಲೇ ಬಾರ್ ಗೆ ನುಗ್ಗಿ ವ್ಯಕ್ತಿಯೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ತಿ.ನರಸೀಪುರದಲ್ಲಿ ನಡೆದಿದೆ. ಹಲ್ಲೆ ನಡೆಸಿದ ದೃಶ್ಯಗಳು ಬಾರ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ದಯಾನಂದ್(29) ಹಲ್ಲೆಗೊಳಗಾದವರು. ಹಲ್ಲೆ ನಡೆಸಿದ ಆರೋಪಿಗಳಾದ ಗುರು,ಬಿಂದಾಸ್,ಚಂದ್ರು ಹಾಗೂ ಇತರರು ಪರಾರಿಯಾಗಿದ್ದಾರೆ. ಬನ್ನೂರಿನ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ದಯಾನಂದ್ ವೆಹಿಕಲ್ ಲೋನ್ ಸೆಟಲ್ ಮೆಂಟ್ ಮಾಡಿಕೊಂಡು ಊಟ ಮಾಡುತ್ತಿದ್ದನು. ಈ ವೇಳೆ ಗುರು,ಬಿಂದಾಸ್,ಚಂದ್ರು ಸೇರಿದಂತೆ ಐದಾರು ಯುವಕರ ಗುಂಪು ಏಕಾಏಕಿ ದಾಳಿ ನಡೆಸಿದೆ.
ದಯಾನಂದ್ ಮೇಲೆ ಲಾಂಗ್ ಹಾಗೂ ಬಿಯರ್ ಬಾಟಲ್ ಗಳಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆ ನಡೆಸಿದ ಆರೋಪಿಗಳು ಹಾಗೂ ದಯಾನಂದ್ ನಡುವೆ ಹಳೇ ವೈಷಮ್ಯ ಇತ್ತು. ಈ ಹಿನ್ನಲೆ ದಯಾನಂದ್ ಬನ್ನೂರು ತೊರೆದು ಮೈಸೂರಿನಲ್ಲಿ ವಾಸವಿದ್ದರು. 6 ತಿಂಗಳ ಹಿಂದೆ ಮತ್ತೆ ಬನ್ನೂರಿಗೆ ವಾಪಸ್ ಆಗಿದ್ದರು. ದಯಾನಂದ್ ಬಾರ್ ನಲ್ಲಿರುವ ಮಾಹಿತಿ ಅರಿತ ದುಷ್ಕರ್ಮಿಗಳ ತಂಡ ದಾಳಿ ನಡೆಸಿದೆ. ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.