ಸದ್ಯದಲ್ಲೇ ಎಎಪಿ 90 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ತುಮಕೂರು; ಮುಂಬರುವ ವಿಧಾನಸಭೆ ಚುನಾವಣೆಯ ಎಎಪಿಯ 90 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸದ್ಯದಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಿಡುಗಡೆ ಮಾಡಲಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಡಾ.ಬಿ.ಎಲ್.ವಿಶ್ವನಾಥ್ ಹೇಳಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ನಡೆದ ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಪದಾಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಆಮ್ ಆದ್ಮಿ ಪಾರ್ಟಿಯ ಟಿಕೇಟ್ ಆಕಾಂಕ್ಷಿಗಳಿಗೆ ಪಕ್ಷದ ವರಿಷ್ಠರು ನೀಡಿದ ಕಾರ್ಯಸೂಚಿ ಅನ್ವಯ ಕೆಲಸ ಮಾಡಿದ ಅಭ್ಯರ್ಥಿಗಳನ್ನು ಎ ಬಿ ಮತ್ತು ಸಿ ಗ್ರೇಡ್ ಅನ್ವಯ ವಿಂಗಡಿಸಲಾಗಿದೆ. ಇದರಲ್ಲಿ ಎ ಗ್ರೇಡ್ ನಲ್ಲಿರುವ 90ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸದ್ಯದಲ್ಲೇ ಬೆಂಗಳೂರಿಗೆ ಆಗಮಿಸುವ ಅರವಿಂದ್ ಕೇಜ್ರಿವಾಲ್ ಬಿಡುಗಡೆ ಮಾಡಲಿದ್ದಾರೆ ಎಂದರು.
ಜಿಲ್ಲೆಯ ಹನ್ನೊಂದು ವಿಧಾನ ಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್, ಜೆಡಿಎಸ್, ಬಿಜೆಪಿಗೆ ತೀವ್ರ ಪೈಪೋಟಿ ನೀಡುವ ಅಭ್ಯರ್ಥಿಗಳೇ ಕಣಕ್ಕಿಳಿಯಲಿದ್ದು, ಈ ಬಾರಿ ಚತುಷ್ಕೋನ ಸ್ಪರ್ಧೆಗೆ ಆಮ್ ಆದ್ಮಿ ಪಾರ್ಟಿ ನಾಂದಿ ಹಾಡಲಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಅಂಕಸಂದ್ರ ಪ್ರೇಮಕುಮಾರ್ ಅಭಿಪ್ರಾಯಪಟ್ಟರು.
ಜನಸಾಮಾನ್ಯರನ್ನೇ ನಾಯಕರನ್ನಾಗಿ ರೂಪಿಸುವ ಆಮ್ ಆದ್ಮಿ ಪಾರ್ಟಿಯ ಸೇರ್ಪಡೆಗೆ ಹೆಚ್ಚಿನ ಯುವಕರು, ಅದರಲ್ಲಿಯೂ ಹೊಸ ಮತದಾರರು ಮುಂದಾಗುತ್ತಿದ್ದಾರೆ ಎಂದರು.