ರಾಮದಾಸರ ಜಮೀನಿನಲ್ಲಿ ಸಿಕ್ಕ ಕಲ್ಲು ರಾಮನ ಮೂರ್ತಿಯಾಯಿತು!
ಮೈಸೂರು; ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆಗಳು ನಡೆಯುತ್ತಿವೆ. ಇದಕ್ಕಾಗಿ ಮೂರು ಮೂರ್ತಿಗಳನ್ನು ತಯಾರು ಮಾಡಿದ್ದು, ಇದರಲ್ಲಿ ಎರಡು ಮೂರ್ತಿಗಳನ್ನು ಕರ್ನಾಟಕದ ಕಲಾವಿದರು ಕೆತ್ತನೆ ಮಾಡಿದ್ದಾರೆ. ಈ ಮೂರರಲ್ಲಿ ಒಂದನ್ನು ಪ್ರಾಣಪ್ರತಿಷ್ಠೆ ಮಾಡಲಾಗುತ್ತದೆ. ಹಾಗೆ ತಯಾರಾದ ಮೂರು ಮೂರ್ತಿಗಳಲ್ಲಿ ಒಂದು ಮೈಸೂರಿನ ಅರುಣ್ ಯೋಗಿರಾಜ್ ಎಂಬ ಕಲಾವಿದರು ಕೆತ್ತನೆ ಮಾಡಿದ್ದಾರೆ. ಈ ಮೂರ್ತಿಗೆ ಕಲ್ಲು ಆಯ್ಕೆ ಮಾಡಿದ್ದೇ ಒಂದು ಪವಾಡ ಎಂದು ಹೇಳಲಾಗುತ್ತಿದೆ.
ಹೆಚ್‌ಡಿ ಕೋಟೆ ಸುತ್ತಮುತ್ತ ಸಿಗುವ ಕೃಷ್ಣ ಶಿಲೆ ದೇವರ ಮೂರ್ತಿ ಕೆತ್ತನೆಗೆ ಅತ್ಯಂತ ಪ್ರಶಸ್ತವಾದ ಕಲ್ಲು. ಹೀಗಾಗಿ ಕಲ್ಲಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಈ ವೇಳೆ ಹಾರೋಹಳ್ಳಿ ಗ್ರಾಮದ ರಾಮ್ ದಾಸ್ ಎಂಬುವವರ ಜಮೀನಿನಲ್ಲಿ ಈ ಕಲ್ಲು ಪತ್ತೆಯಾಗಿದೆ. ಹೀಗಾಗಿ ಈ ಜಮೀನು ಗುತ್ತಿಗೆ ಪಡೆದಿದ್ದ ಗುಜ್ಜೇಗೌಡನಪುರದ ಶ್ರೀನಿವಾಸ್ ಅವರನ್ನು ಕಲಾವಿದರು ಸಂಪರ್ಕ ಮಾಡಿ ಕಲ್ಲು ಪಡೆದಿದ್ದರು.
ಮಾನಯ್ಯ ಬಡಿಗೇರ್ ಎಂಬುವವರು ಈ ಕಲ್ಲನ್ನು ಪರೀಕ್ಷೆ ಮಾಡಿ, ಇದು ವಿಗ್ರಹ ಕೆತ್ತನೆಗೆ ಸೂಕ್ತವಾಗಿದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿರಾಮ್ ದಾಸ್ ಜಮೀನಲ್ಲಿ 10 ಅಡಿ ಆಳ ಅಗೆದು ಶಿಲೆಯನ್ನು ಹೊರತೆಗೆಯಲಾಯಿತು. ಇದು 19 ಟನ್ ತೂಕದ ಸುಮಾರು 9 ಅಡಿ 8 ಇಂಚು ಉದ್ದದ ಶಿಲೆಯಾಗಿತ್ತು.
ಈ ಶಿಲೆಯನ್ನು ಆಯೋಧ್ಯೆಗೆ ತಂದು ರಾಮನ ಜೊತೆಗೆ ಸೀತೆ, ಲಕ್ಷ್ಮಣ, ಭರತ, ಶತೃಜ್ಞ ಮೂರ್ತಿಗಳನ್ನೂ ತಯಾರಿಸಲಾಗಿದೆ. ಇದಕ್ಕಾಗಿ ಮತ್ತಷ್ಟು ಕಲ್ಲುಗಳನ್ನು ಇಲ್ಲಿಂದ ಕಳುಹಿಸಿಕೊಡಲಾಗಿದೆ ಎಂದು ಹಾರೋಹಳ್ಳಿ ಗ್ರಾಮಸ್ಥರು ಹೇಳುತ್ತಾರೆ.