Districts

ಹಳ್ಳದಲ್ಲಿ ಕೊಚ್ಚಿಹೋದ ಶಾಲಾ ಬಾಲಕಿ; ರಕ್ಷಣಾ ತಂಡದಿಂದ ಹುಡುಕಾಟ

ಚಿಕ್ಕಮಗಳೂರು; ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಜೋರು ಮಳೆಯಾಗುತ್ತಿದ್ದು, ಹಳ್ಳಕೊಳ್ಳಗಳು ಭೋರ್ಗರೆದು ಹರಿಯುತ್ತಿವೆ. ಇದೇ ವೇಳೆ ಶಾಲೆಯಿಂದ ಹಿಂತಿರುಗುತ್ತಿದ್ದ ಒಂದನೇ ತರಗತಿ ಬಾಲಕಿಯೊಬ್ಬಳು ಕಾಲಿಗೆ ಅಂಟಿದ್ದ ಕೆಸರು ತೊಳೆದುಕೊಳ್ಳಲು ಹೋಗಿ ಹಳ್ಳದಲ್ಲಿ ಕೊಚ್ಚಿಹೋಗಿದ್ದಾಳೆ. ನಿನ್ನೆ ಸಂಜೆಯಿಂದ ಆಕೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. 

ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.  ಸುಪ್ರಿತಾ(6) ಹಳ್ಳದಲ್ಲಿ ಕೊಚ್ಚಿಹೋಗಿರುವ ಬಾಲಕಿ. ಸುಪ್ರಿತಾ ತನ್ನ ಅಣ್ಣನ ಜೊತೆ ಶಾಲೆ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ಅಣ್ಣ-ತಂಗಿ ಇಬ್ಬರೂ ಹಳ್ಳದಲ್ಲಿ ಕಾಲು ತೊಳೆಯಲು ಹೋಗಿದ್ದರು. ಆ ವೇಳೆ ಸುಪ್ರಿತಾ ನೀರಲ್ಲಿ ಕೊಚ್ಚಿ ಹೋಗಿದ್ದಾಳೆ. ಒಂದು ವಾರದಿಂದ ಸುಪ್ರೀತಾಗೆ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ಒಂದು ವಾರದಿಂದ ಶಾಲೆಗೆ ಹೋಗಿರಲಿಲ್ಲ. ಸೋಮವಾರವಷ್ಟೇ ಶಾಲೆಗೆ ಮರಳಿದ್ದಳು. ಅಂದೇ ಈ ದುರ್ಘಟನೆ ನಡೆದಿದೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಭೇಟಿ ನೀಡಿದ್ದರು. ಸ್ಥಳೀಯರು ಜೊತೆ ಅಧಿಕಾರಿಗಳು ಕೂಡ ನೀರಿನಲ್ಲಿ ಧುಮುಕಿ ಹರಿಯುವ ಹಳ್ಳದಲ್ಲಿ ಬಾಲಕಿಯನ್ನು ಹುಡುಕುವ ಪ್ರಯತ್ನ ಮಾಡಿದ್ದರು. ಆದರೂ ಬಾಲಕಿ ಪತ್ತೆಯಾಗಲಿಲ್ಲ.

 

Share Post