Districts

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ: ಹೊಲದಲ್ಲಿ ನಿಂತು ಕಣ್ಣೀರಾಕಿದ ವೃದ್ಧೆ-ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಣಗಿದ ಬೆಳೆ

ಮೈಸೂರು: ಇಷ್ಟು ದಿನ ಕೊರೊನಾ ಅಂತ ಅನ್ನದಾತನ ಬದುಕು ಬರಡಾಗುವಂತೆ ಮಾಡಿತ್ತು. ಸರಿಯಾದ ಬೆಂಬಲ ಬೆಲೆ ಇಲ್ಲದೆ ರೈತ ಕಂಗಾಲಾಗಿದ್ದಾನೆ. ಪ್ರಕೃತಿ ವಿಕೋಪಗಳಿಂದ ಬೆಳೆದ ಬೆಳೆ ಕೈಗೆ ಸಿಗದೆ ಪರದಾಡುವ ಸ್ಥಿತಿ ಒಂದು ಕಡೆ. ಹೀಗಿರುವಾಗ ಅನ್ನದಾತನನ್ನು ಬೆಳೆಸಬೇಕಾದ ಸರ್ಕಾರ ಮಾತ್ರ ಆತನನ್ನು ಮತ್ತಸಷ್ಟು ಸಂಕಷ್ಟ ಪರಿಸ್ಥಿತಿಗೆ ದೂಡಲು ಎಲ್ಲಾ ಪ್ರಯತ್ನಗಳನ್ನು ಮಾಡುವಂತೆ ಕಾಣುತ್ತಿದೆ.

ಇದು ಮೈಸೂರಿನ ಅಜ್ಜಿಯ ವ್ಯಥೆ. ಟಿ.ನರಸೀಪುರ ತಾಲೂಕಿನ ಹೊಸೂರುಹುಂಡಿ ಗ್ರಾಮದಲ್ಲಿಸಾಲ ಸೋಲ ಮಾಡಿದ ಹಣದಿಂದ ಬೆಳೆ ಬೆಳದರೆ ಇನ್ನೇನು ಫಸಲು ಕೈಗೆ ಬರುವ ಹೊತ್ತಿನಲ್ಲಿ ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇದೀಗ ಬೆಳೆ ಒಣಗುವ ಪರಿಸ್ಥಿತಿಗೆ ಬಂದು ತಲುಪಿದೆ. ಇಷ್ಟು ದಿನ ಸುಮ್ಮನಿದ್ದ ಅಧಿಕಾರಿಗಳು ಸರಿಯಾಗಿ ಕರೆಂಟ್‌ ಕೊಡದೆ ಸತಾಯಿಸುತ್ತಿದ್ದಾರೆ. ಇತ್ತ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗದೆ ಬೆಳೆಯೆಲ್ಲಾ ಒಣಗಿ ಹೋಗಿದೆ.

ಒಣಗಿದ ಬೆಳೆ ಮಧ್ಯೆ ನಿಂತು ವೃದೆಯೊಬ್ಬರು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ. ಕಣ್ಣೀರು ಹಾಕುತ್ತಾ ನನ್ನ ಮಗನನ್ನು ಉಳಿಸಿಕೊಡಿ ಸ್ವಾಮಿ ಎಂದು ಅಂಗಲಾಚುತಿದ್ದಾರೆ. ಭೂಮಿ ತಾಯಿ ಕೈ ಹಿಡಿತಾಳೆ ಅಂತ ಸಿಕ್ಕ ಸಿಕ್ಕ ಕಡೆಯೆಲ್ಲಾ ಸಾಲ ಮಾಡಿಕೊಂಡು ಬಂದು ಬೆಳೆ ಇಟ್ಟಿದ್ದೇವೆ. ಈಗ ಸರಿಯಾಗಿ ಕರೆಂಟ್‌ ಕೊಡದೆ ಬೆಳೆಯೆಲ್ಲಾ ಒಣಗಿ ಹೋಗಿದೆ. ಕೈಗೆ ಬಂದ  ತುತ್ತು ಬಾಯಿಗೆ ಬರದಂತೆ ಆಗಿದೆ ಎಂದು ವೃದ್ದೆ ಅಳಲು ತೋಡಿಕೊಂಡಿದ್ದಾರೆ. ನನ್ನ ಮಗನಿಗೇನಾದ್ರೂ ಆದರೆ ಖಂಡಿತಾ ನಾನು ಬದುಕುಳಿಯುವುದಿಲ್ಲ ಎಂದು ಗೋಳಾಡಿರುವ ವಿಡಿಯೋ ನೊಡಿದ್ರೆ ಕರುಲೂ ಚುರ್‌ ಎನ್ನುವಂತಿದೆ. ಒಂದೆಡೆ ಒಣಗಿದ ಬೆಳೆ, ಇನ್ನೊಂದೆಡೆ ಸಾಲಗಾರರು, ಮತ್ತೊಂದೆಡೆ ತಲೆ ಮೇಲೆ ಕೈ ಹೊತ್ತು ಕುಳಿತಿರುವ ಮಗ, ಇದೆಲ್ಲವನ್ನು ನೋಡಿ ಅಜ್ಜಿ ಮಮ್ಮಲ ಮರುಗಿದ್ದಾರೆ.

ಎಲ್ಲೋ ನಗರಗಳಲ್ಲಿ ಆರಾಮಾಗಿ ಎಸಿ ರೂಂಗಳಲ್ಲಿ ಕೆಲಸ ಮಾಡಿಕೊಂಡು ಇರುವವರಿಗೆ ದಿನಪೂರ್ತಿ ಕರೆಂಟ್‌ ಕೊಡ್ತಾರೆ. ಆದ್ರೆ ದೇಶದ ಬೆನ್ನುಲುಬು ಅಂತ ಮಾತ್ರ ರೈತನನ್ನು ಅಟ್ಟಕ್ಕೆ ಏರಿಸುತ್ತಾರೆ. ಆದ್ರೆ ಅವರ ಬೇಕು ಬೇಡಗಳನ್ನು ಮಾತ್ರ ಯಾರೂ ಕೇಳುವುದಿಲ್ಲ. ಮೈಸೂರಿನಲ್ಲಿ ಚೆಸ್ಕಾಂ ಅಧಿಕಾರಿಗಳು ಸಮರ್ಪಕವಾಗಿ ವಿದ್ಯುತ್‌ ಪೂರೈಕೆ ಮಾಡುತ್ತಿಲ್ಲ. ಇದರಿಂದ ನಮ್ಮ ಬದುಕು ಬರಡಾಗಿದೆ. ಬೆಳೆಯೆಲ್ಲಾ ಸಂಪೂರ್ಣ ಒಣಗಿ ಹೋಗಿ ಕಣ್ಣೀರಾಕುತ್ತಿದ್ದಾರೆ ಮೈಸೂರಿನ ಅನ್ನದಾತರು.

Share Post