ಸುವರ್ಣಸೌಧದ ಆವರಣದಲ್ಲಿ ಚೆನ್ನಮ್ಮ, ರಾಯಣ್ಣ ಪ್ರತಿಮೆ
ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆಗಳನ್ನು ಸ್ಥಾಪನೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿಯವರು ವಿಧಾನಸಭೆಯಲ್ಲಿ ಘೋಷಣೆ ಮಾಡಿದಾರೆ.
ರಾಯಣ್ಣನ ಪ್ರತಿಮೆ ಧ್ವಂಸಗೊಳಿಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ದೇಶದ್ರೋಹ, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಹೇಳಿದರು.
ಎಂಇಎಸ್ ನಿಷೇಧ ಮಾಡಬೇಕೆಂದು ಕನ್ನಡ ಪರ ಹೋರಾಟಗಾರರು ಆಗ್ರಹಿಸುತ್ತಿದ್ದಾರೆ. ಈ ಕೂಗು ಹೆಚ್ಚಾಗಿದ್ದರಿಂದ ಸದನದಲ್ಲಿ ಸಿಎಂ ಉತ್ತರ ನೀಡಿದರು. ಕಾನೂನು ಪ್ರಕಾರ ಏನು ಕ್ರಮ ಕೈಗೊಳ್ಳಬಹುದೋ ನೋಡುತ್ತೇವೆ. ಅದರಂತೆ ನಿರ್ಧಾರ ಕೈಗೊಳ್ಳುತ್ತೇವೆ ಎಂದರು. ಎಂಇಎಸ್ ನಿಷೇಧ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಇಂತಹ ಕೃತ್ಯ ಎಸಗದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ಸಿಎಂ ಇದೇ ಸಂದರ್ಭದಲ್ಲಿ ತಿಳಿಸಿದರು.