ಮೇಕೆದಾಟು ಪಾದಯಾತ್ರೆ 2.0 ಗೆ ಚಾಲನೆ
ಬೆಂಗಳೂರು: ವಂದೇ ಮಾತರಂ, ನಾಡಗೀತೆ, ರೈತಗೀತೆ ಮೂಲಕ ಮೇಕೆದಾಟು ಪಾದಯಾತ್ರೆ 2.0 ಗೆ ರಾಮನಗರದಲ್ಲಿ ಭಾನುವಾರ ಚಾಲನೆ ನೀಡಲಾಯಿತು. ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇದೊಂದು ಐತಿಹಾಸಿಕ ನಡಿಗೆ. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅಪಮಾನ, ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅಪಮಾನ. ಅದಕ್ಕಾಗಿ ನಮ್ಮ ಪಕ್ಷದ ಸಾಧನೆ ಹಾಗೂ ಇತಿಹಾಸವನ್ನು ಮನದಲ್ಲಿಟ್ಟುಕೊಂಡು ನಾವು ಇಂದು ಹೋರಾಟ ಆರಂಭಿಸುತ್ತಿದ್ದೇವೆ ಎಂದರು.
ಬಿಜೆಪಿ ಹಾಗೂ ಜೆಡಿಎಸ್ ನಾಯಕರು ನಮ್ಮ ಹೋರಾಟದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ನಾನು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನೀರಿಗಾಗಿ ನಡಿಗೆ ಈ ಮೇಕೆದಾಟು ಪಾದಯಾತ್ರೆಯನ್ನು ಎಂತಹ ಶುಭ ಗಳಿಗೆಯಲ್ಲಿ ಆರಂಭಿಸಿದ್ದೇವೆ. ಬುದ್ಧ ಬಸವನು ಮನೆ ಬಿಟ್ಟ ಗಳಿಗೆ, ಏಸು ಕ್ರಿಸ್ತ ಶಿಲುಬೆಗೆ ಏರಿದ ಗಳಿಗೆ, ಪ್ರವಾದಿ ಪೈಗಂಬರ್ ದಿವ್ಯವಾಣಿ ಕೇಳಿದ ಗಳಿಗೆ, ಭೀಮಾಭಾಯಿ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಜನ್ಮಕೊಟ್ಟ ಗಳಿಗೆ, ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ನಾಯಕತ್ವ ವಹಿಸಿದ ಗಳಿಗೆ, ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ಕಟ್ಟಿದ ಗಳಿಗೆ, ಶ್ರೀಮತಿ ಸೋನಿಯಾ ಗಾಂಧಿ ಅವರು ಈ ದೇಶಕ್ಕಾಗಿ ಪ್ರಧಾನಮಂತ್ರಿ ಹುದ್ದೆಯನ್ನು ಆರ್ಥಿಕ ತಜ್ಞನಿಗೆ ತ್ಯಾಗ ಮಾಡಿದ ಗಳಿಗೆಯಲ್ಲಿ ಇಂದು ನಾವು ಆರಂಭಿಸಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಇದೇ ಸಂದರ್ಭದಲ್ಲಿ ತಿಳಿಸಿದರು.