Districts

ನ್ಯಾಯಾಲಯ ನೀಡುವ ತೀರ್ಪನ್ನು‌ ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು: ಬಸವರಾಜ ಹೊರಟ್ಟಿ

ಹುಬ್ಬಳ್ಳಿ: ಹಿಜಾಬ್‌ ವಿಚಾರಕ್ಕೆ ಶಾಲಾ-ಕಾಲೇಜಿಗೆ ರಜೆ ನೀಡದ್ದು ತಪ್ಪು ಎಂದು ಸಭಾಪತಿ ಬಸವರಾಜ್‌ ಹೊರಟ್ಟಿ ಟೀಕಿಸಿದ್ದಾರೆ. ಇದನ್ನು ಹತ್ತಿಕ್ಕುವ ಕೆಲಸ ಮಾಡುವ ಬದಲು ರಜೆ ನೀಡಿರುವ ಕ್ರಮ ಸರಿಯಲ್ಲ ಎಂದಿದ್ದಾರೆ. ಸದ್ಯ ಹಿಜಾಬ್ ವಿವಾದ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯದಿಂಎ ಯಾವುದೇ ತೀರ್ಪು ಬಂದರೂ ಸರ್ಕಾರ ತೀರ್ಪನ್ನು ಸ್ವಾಗತಿಸಿ, ಕಟ್ಟುನಿಟ್ಟಾಗಿ ನ್ಯಾಯಾಲಯದ ಆದೇಶ ಜಾರಿ ಮಾಡಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೂಚನೆ ನೀಡಿದ್ದಾರೆ.

ಈಗಾಗಲೇ ಹತ್ತನೇ ತರಗತಿವರೆಗೆ ಈಗಾಗಲೇ ಸಮವಸ್ತ್ರ ಇದ್ದು, ಆದರೆ ಕಾಲೇಜಿಗೆ ಸಮವಸ್ತ್ರ ಇಲ್ಲ. ಹಾಗಾಗಿ ಕೋರ್ಟ್ ಯಾವ ತೀರ್ಮಾನ ಕೈಗೊಳ್ಳುವುದು ಎಂಬುದನ್ನು ಕಾದು ನೋಡಬೇಕು.  ಸಮವಸ್ತ್ರ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ಇರುವ ಕಾರಣ ಇದನ್ನು ಸದನದಲ್ಲಿ ಚರ್ಚೆ ಮಾಡಲು ಬರುವುದಿಲ್ಲ. ನ್ಯಾಯಾಲಯದ ಮೆಟ್ಟಿಲು ಹತ್ತುವ ಮುಂಚೆಯೇ ಆಗಿದ್ದರೆ‌ ಚರ್ಚೆ ನಡೆಸಬಹುದಾಗಿತ್ತು ಎಂದರು.

ಹಿಜಾಬ್ ವಿವಾದ ಕೆಲವರ ಹಿಡನ್ ಅಜೆಂಡ್ ಆಗಿರಬಹುದು. ಈಗಾಗಲೇ ಹಿಜಾಬ್ ವಿವಾದ ಸೃಷ್ಟಿ ಕೆಲ ವಿದ್ಯಾರ್ಥಿನಿಯರ ಹಿಡನ್ ಅಜೆಂಡಾ ಇತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾಗಾಗಿ ಆ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ದುಷ್ಟ ಶಕ್ತಿಗಳು ಯಾವಾಗಲೂ ಸಮಾಜದಲ್ಲಿ ಘಾತುಕ ಕೆಲಸಗಳನ್ನೇ ಮಾಡುತ್ತವೆ. ಕೆಲವರಿಗೆ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವುದೇ ಕೆಲಸವಾಗಿ ಬಿಟ್ಟಿದೆ. ಹಾಗಾಗಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸಮಾಜಘಾತುಕರು ಯಾವುದೇ ಜಾತಿ, ಧರ್ಮ ಇರಲಿ ಅಂಥವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಿಜಾಬ್ ವಿವಾದವನ್ನು ಆಡಳಿತ ಮತ್ತು ವಿರೋಧ ಪಕ್ಷಗಳು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದು ದುರ್ದೈವದ ಸಂಗತಿ. ಇದರಿಂದ ಮುಂದೆ ಏನೋ ಅನಾಹುತ ಆಗುತ್ತೆ ಎಂಬುದನ್ನು ಎಲ್ಲ ಪಕ್ಷಗಳು ತಿಳಿಯಬೇಕು. ಈ ಸಂದರ್ಭವನ್ನು ಸಮಾಜಘಾತುಕ ಶಕ್ತಿಗಳು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಹಾಗಾಗಿ ರಾಜ್ಯದ ಮುಖ್ಯಮಂತ್ರಿ ಎಲ್ಲರ ಜೊತೆಗೆ ಚರ್ಚಿಸಿ ಸೌಹಾರ್ದಯುತ ವಾತಾವರಣ ನಿರ್ಮಾಣ ಮಾಡಬೇಕು. ಅದನ್ನು ಬಿಟ್ಟು ಮತ್ತಷ್ಟು ಬೆಂಕಿ ಹಚ್ಚುವ ಕೆಲಸ ಯಾರೂ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.

 

Share Post