Districts

ಪ್ರತಿಭಟನೆಯ ನಡುವೆಯೇ ದಸರಾ ಆನೆ ಅರ್ಜುನನ ಅಂತ್ಯಕ್ರಿಯೆ

ಕಾಡಾನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ 2012 ರಿಂದ 2019ರವರೆಗೆ 8 ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಆನೆ ಕ್ಯಾಪ್ಟನ್ ಅರ್ಜುನ ಸಾವನ್ನಪ್ಪಿದ್ದಾನೆ. ಇಂದು ಅರ್ಜನನ ಅಂತ್ಯಕ್ರಿಯೆ ನಡೆಸಲಾಗಿದೆ. ಆದ್ರೆ ಅರ್ಜುನನ ಸಾವಿನ ಬಗ್ಗೆ ಹಲವು ಅನುಮಾನಗಳು ಶುರುವಾಗಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಇನ್ನೊಂದೆಡೆ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿಯ ದಬ್ಬಳಿಕಟ್ಟೆ ಅರಣ್ಯದಲ್ಲಿ ಅರ್ಜುನ ಮೃತ ಪಟ್ಟಿದ್ದು, ಅಲ್ಲೇ ಅಂತ್ಯಕ್ರಿಯೆ ನಡೆಸಲು ಅರಣ್ಯ ಇಲಾಖೆ ಸಿದ್ಧತೆ ಮಾಡಿತ್ತು. ಆದ್ರೆ, ಜನರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸ್ಮಾರಕ ಕಟ್ಟುವ ಸಲುವಾಗಿ ಬೇರೆಡೆ ಅಂತ್ಯಕ್ರಿಯೆ ಮಾಡುವಂತೆ ಆಗ್ರಹಿಸಿದ್ದರು. ಈ ವೇಳೆ ಪೊಲೀಸರು ಲಾಠಿ ಚಾರ್ಜ್‌ ಕೂಡಾ ಮಾಡಿದ ಘಟನೆ ನಡೆದಿದೆ.

ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿಯ ದಬ್ಬಳಿಕಟ್ಟೆ ಅರಣ್ಯದಲ್ಲಿ ಆನೆ ಅರ್ಜುನ ಸಾವನ್ನಪ್ಪಿದ್ದು, ಅಲ್ಲಿಯೇ ಅಂತ್ಯಕ್ರಿಯೆ ನಡೆಸಲಾಗಿದ್ದು, ಈ ವೇಳೆ ಸಾರ್ವಜನಿಕರಿಂದ ಆಕ್ರೋಶ ಭುಗಿಲೆದ್ದಿದೆ. ಕಾಡಾನೆ ಕಾರ್ಯಾಚರಣೆ ವೇಳೆ ಅರ್ಜನನಿಗೆ ಕಾಡಾನೆ ತಿವಿದಿದ್ದರಿಂದ ಸಾವನ್ನಪ್ಪಿದೆ ಎಂದು ಹೇಳಲಾಗಿತ್ತು. ಆದ್ರೆ, ಈ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಗುರಿತಪ್ಪಿ ಅರ್ಜುನ ಆನೆಯ ಕಾಲಿಗೆ ಗುಂಡು ಹೊಡೆದಿದ್ದಾರೆ. ಇದರಿಂದಾಗಿ ಅರ್ಜುನ ಆನೆ ಸಾವನ್ನಪ್ಪಿದೆ ಎಂಬ ಆರೋಪ ಕೇಳಿಬಂದಿದೆ.

ಆದ್ರೆ ಅರಣ್ಯ ಇಲಾಖೆ ಅಧಿಕಾರಿಗಳು ಹೇಳೋದೇ ಬೇರೆ..!
ಹಾಸನ ಅರಣ್ಯ ವಿಭಾಗದ ಆಲೂರು, ಬೇಲೂರು, ಸಕಲೇಶಪುರ ಮತ್ತು ಯಸಳೂರು ವಲಯಗಳ ವ್ಯಾಪ್ತಿಯಲ್ಲಿ ಕಾಡಾನೆಗಳು ಉಪಟಳ ನೀಡುತ್ತಿದ್ದವು. ಈ ಹಿನ್ನೆಲೆಯಲ್ಲಿ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವುದು ಮತ್ತು ಸೆರೆಹಿಡಿದು ಸ್ಥಳಾಂತರಿಸುವ ಕಾರ್ಯಾಚರಣೆ 11ನೇ ದಿನವಾದ 04 ಡಿಸೆಂಬರ್ ರಂದು ನಡೆಯಿತು. ಆನೆ ಕಾರ್ಯಪಡೆ ತಂಡದ ಸದಸ್ಯರು ಮತ್ತು ವಿಶೇಷ ಕಾವಾಡಿಗರು ಇದರಲ್ಲಿ ಭಾಗಿಯಾಗಿದ್ದರು. ಉಪಟಳ ನೀಡುತ್ತಿದ್ದ ಕಾಡಾನೆಗಳ ಗುಂಪೊಂದು ಯಸಳೂರು ವಲಯದ ದಬ್ಬಳ್ಳಿಕಟ್ಟೆ ಸಮೀಪದ ಕೆ.ಎಫ್.ಡಿ.ಸಿ ನೆಡುತೋಪಿನಲ್ಲಿ ಇರೋದು ಗೊತ್ತಾಯಿತು. ಈ ಮಾಹಿತಿ ಆಧಾರದ ಮೇಲೆ ಬೇಲೂರಿನ ಚಿಕ್ಕೋಡು ಕ್ಯಾಂಪ್‌ನಿಂದ ಬೆಳಗ್ಗೆ 11: 30ಕ್ಕೆ ಅರ್ಜುನ, ಸುಗ್ರೀವ, ಅಶ್ವಥಾಮ, ಧನಂಜಯ, ಕರ್ನಾಟಕ ಭೀಮ, ಪ್ರಶಾಂತ ಎಂಬ ಆನೆಗಳನ್ನು ತರಾಲಾಗಿತ್ತು.

ಕುಮ್ಮಿ ಆನೆಗಳೊಂದಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶು ವೈದ್ಯಾಧಿಕಾರಿಗಳಾದ ಡಾ. ರಮೇಶ್ ಹೆಚ್, ದುಬಾರೆ ಆನೆ ಶಿಬಿರದ ಉಪ ವಲಯ ಅರಣ್ಯ ಅಧಿಕಾರಿ ರಂಜನ್ ಮತ್ತು ಇಲಾಖಾ ಅಧಿಕಾರಿ/ ಸಿಬ್ಬಂದಿಯೊಂದಿಗೆ ತಂಡವು ಅಲ್ಲಿಗೆ ತೆರಳಿತ್ತು. ಪರಿಶೀಲನೆ ವೇಳೆ ಉಪಟಳ ನೀಡುತ್ತಿದ್ದ ಒಂದು ಕಾಡಾನೆಯು ಇತರೆ ಕಾಡಾನೆಯ ಗುಂಪಿನಲ್ಲಿರೋದು ಗೊತ್ತಾಗಿದೆ. ಆ ಕಾಡಾನೆಯನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು. ಆಗ ಗುಂಪಿನಲ್ಲಿದ್ದ ಇತರೆ 12 ಕಾಡಾನೆಗಳನ್ನು ಸದರಿ ಕಾಡಾನೆ ರಕ್ಷಣೆ ಮಾಡ್ತಿರೋದು ಕಂಡುಬಂದಿದೆ. ಅದೇ ಕಾಡಾನೆಯನ್ನು ಸೆರೆ ಹಿಡಿಯಬೇಕಾಗಿದ್ದರಿಂದ ಚುಚ್ಚುಮದ್ದು ನೀಡಲು ನಿರ್ಧರಿಸಲಾಗಿದೆ. ಕಾರ್ಯಾಚರಣೆಯಲ್ಲಿ ಟಾರ್ಗೆಟ್ ಮಾಡಿದ್ದ ಕಾಡಾನೆಯು ಬಲಿಷ್ಟವಾಗಿತ್ತು. ಇದು ಮಸ್ತಿನಲ್ಲಿದ್ದಿದ್ದರಿಂದ ನಮ್ಮ ಆನೆಗಳ ಮೇಲೆ ಏಕಾಏಕಿ ದಾಳಿ ಮಾಡಲು ಪ್ರಾರಂಭಿಸಿರುತ್ತದೆ. ಆ ಸಂದರ್ಭದಲ್ಲಿ ಇಲಾಖಾ ಸಿಬ್ಬಂದಿ ಗಾಳಿಯಲ್ಲಿ ಹಲವಾರು ಬಾರಿ ಗುಂಡು ಹಾರಿಸಿರುತ್ತಾರೆ.

ಕಾಡಾನೆಯು ನಮ್ಮ ಆನೆಗಳ ಮೇಲೆ ದಾಳಿಯನ್ನು ಮುಂದುವರೆಸಿರುತ್ತದೆ. ಈ ಸಮಯದಲ್ಲಿ ಕುಮ್ಮಿ ಆನೆಗಳು ಹಿಂದಿರುಗುವಾಗ ಕಾಡಾನೆಯು ಅರ್ಜುನನ ಮೇಲೆ ನಿರಂತರವಾಗಿ ದಾಳಿ ಮಾಡಿದೆ. ಅರ್ಜುನ ಆನೆಯ ಎಡಕಿವಿಯ ಪಕ್ಕದ ಹೊಟ್ಟೆಯ ಭಾಗಕ್ಕೆ ಕೋರೆಯಿಂದ ಬಲವಾಗಿ ತಿವಿದ ಕಾರಣ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದೆ ಎಂಬುದು ಅರಣ್ಯಾಧಿಕಾರಿಗಳ ಸಮಜಾಯಿಷಿ.

ಆದ್ರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಕಾವಾಡಿಗರು ಬೇರೆಯೇ ಹೇಳುತ್ತಾರೆ. ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ್ದು, ಅದು ಮಿಸ್‌ ಆಗಿ ಅರ್ಜುನ ಆನೆಯ ಕಾಲಿಗೆ ಬಿದ್ದಿದೆ. ಇದರಿಂದ ಅದು ಹೋರಾಡಲಾಗದೇ ಕೆಳಗೆ ಉರುಳಿದೆ. ಆಗ ಕಾಡಾನೆ ಅದರ ಮೇಲೆ ದಾಳಿ ಮಾಡಿ ಸಾಯಿಸಿದೆ ಎಂದು ಅಲ್ಲಿದ್ದವರು ಹೇಳಿದ್ದಾರೆ. ಹೀಗಾಗಿ, ಅರಣ್ಯ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

Share Post