CrimePolitics

ವಿನಯ್‌ ಕುಲಕರ್ಣಿ ಅರ್ಜಿ ವಜಾ; ಧಾರವಾಡಕ್ಕೆ ಎಂಟ್ರಿ ಇಲ್ಲ – ಕೋರ್ಟ್‌

ಧಾರವಾಡ; ಜಿಲ್ಲಾ ಪಂಚಾಯತ್‌ ಸದಸ್ಯ ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಶಾಸಕ ವಿನಯ್‌ ಕುಲಕರ್ಣಿಯವರು ಧಾರವಾಡ ಪ್ರವೇಶ ಅನುಮತಿ ನೀಡಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾ ಮಾಡಿದೆ.

ದಶಕದ ಹಿಂದೆ ಧಾರವಾಡದಲ್ಲಿ ಜಿಲ್ಲಾ ಪಂಚಾಯತ್‌ ಸದಸ್ಯ ಯೋಗೀಶ್‌ ಗೌಡ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ವಿಚಾರಣೆ ಕೈಗೆತ್ತಿಕೊಂಡಿದ್ದ ಸಿಬಿಐ, ಶಾಸಕ ವಿಜಯ್‌ ಕುಲಕರ್ಣಿಯವರನ್ನು ಬಂಧಿಸಿತ್ತು. ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ವಿಜಯ್‌ ಕುಲಕರ್ಣಿ ಜಾಮೀನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದ್ರೆ, ಸಾಕ್ಷಿ ನಾಶ ಸಾಧ್ಯತೆ ಇರುವುದರಿಂದ ಧಾರವಾಡ ಪ್ರವೇಶ ಮಾಡಬಾರದೆಂದು ವನಯ್‌ ಕುಲಕರ್ಣಿಗೆ ಕೋರ್ಟ್‌ ಸೂಚಿಸಿತ್ತು. ಆದ್ರೆ ಇದೀಗ ಧಾರವಾಡ ಕ್ಷೇತ್ರದಿಂದ ವಿನಯ್‌ ಕುಲಕರ್ಣಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಹೀಗಾಗಿ, ಧಾರವಾಡ ಪ್ರವೇಶಕ್ಕೆ ವಿಧಿಸಿದ್ದ ಷರತ್ತನ್ನು ಸಡಿಲ ಮಾಡಬೇಕೆಂದು ವಿನಯ್‌ ಕುಲಕರ್ಣಿಯವರು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ ಕೋರ್ಟ್‌ ಶಾಸಕರ ಅರ್ಜಿಯನ್ನು ವಜಾಗೊಳಿಸಿದೆ.

ಕೊಲೆ ಪ್ರಕರಣದಲ್ಲಿ ಸುಮಾರು 120 ಸಾಕ್ಷಿಗಳಿದ್ದಾರೆ. ಇದರಲ್ಲಿ 90 ಮಂದಿ ಧಾರವಾಡದವರೇ ಇದ್ದಾರೆ. ಶಾಸಕ ವಿನಯ್‌ ಕುಲಕರ್ಣಿ ಕ್ಷೇತ್ರಕ್ಕೆ ಕಾಲಿಟ್ಟರೆ, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದು ಸಿಬಿಐ ಪರ ವಕೀಲರು ವಾದಿಸಿದ್ದರು. ಇದನ್ನು ಕೋರ್ಟ್‌ ಸಮರ್ಥಿಸಿದೆ.

Share Post