Crime

ಸಹಾರಾ ಮುಖ್ಯಸ್ಥ ಸುಬ್ರತಾ ರಾಯ್‌ಗೆ ಮತ್ತೆ ಬಂಧನ ಭೀತಿ

ಮಧ್ಯಪ್ರದೇಶ: ಸಹಾರಾ ಗ್ರೂಪ್‌ ಮುಖ್ಯಸ್ಥ ಸುಬ್ರತಾ ರಾಯ್‌ಗೆ ಮತ್ತೆ ಬಂಧನದ ಭೀತಿ ಎದುರಾಗಿದೆ. ಕೋರ್ಟ್‌ ಸೂಚನೆ ಹಿನ್ನೆಲೆಯಲ್ಲಿ ಬಂಧನದ ವಾರಂಟ್‌ ಹೊರಡಿಸಿದ್ದಾರೆ. ಹೂಡಿಕೆದಾರರನ್ನು ವಂಚಿಸಿದ ಕೈಗಾರಿಕೋದ್ಯಮಿ ಮತ್ತು ಸಹಾರಾ ಗ್ರೂಪ್ ಅಧ್ಯಕ್ಷ ಸುಬ್ರತಾ ರಾಯ್ ವಿರುದ್ಧ ಮಧ್ಯಪ್ರದೇಶದ ಗುಣ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ. ರಾಯ್, ಅವರ ಪತ್ನಿ ಸ್ವಪ್ನಾ ರಾಯ್ ಸೇರಿದಂತೆ ಇತರ ಐವರನ್ನು ಬಂಧಿಸುವಂತೆ ಆದೇಶಿಸಲಾಗಿದೆ.

   ಸಹಾರಾ ಇಂಡಿಯಾ ಹೆಸರಿನಲ್ಲಿ ಜನರಿಂದ ಹೂಡಿಕೆ ಮಾಡಿಸಿಕೊಳ್ಳಲಾಗಿತ್ತು. ಆದರೆ ಆ ಹಣ ಹಿಂತಿರುಗಿಸಿರಲಿಲ್ಲ. ಕೋಟ್ಯಂತರ ವಂಚನೆ ಹಿನ್ನೆಲೆಯಲ್ಲಿ ಈ ಹಿಂದೆ ಕೂಡಾ ಸುಬ್ರತಾ ರಾಯ್‌ರನ್ನು ಬಂಧಿಸಲಾಗಿತ್ತು. ಹೂಡಿಕೆದಾರರಿಗೆ ರಾಯ್ ಮೋಸ ಮಾಡಿದ್ದರಿಂದ ರಜತ್ ಶರ್ಮಾ ಮತ್ತು ಇತರರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಪರಿಣಾಮ ಸುಬ್ರತಾ ರಾಯ್, ಅವರ ಪತ್ನಿ ಸ್ವಪ್ನಾ ರಾಯ್, ಜೆಬಿ ರಾಯ್, ಒಪಿ ಶ್ರೀವಾಸ್ತವ, ಶಂಕರಚರಣ್ ಶ್ರೀವಾಸ್ತವ ಮತ್ತು ಶಿವಾಜಿ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420, 406 ಮತ್ತು ಮಧ್ಯಪ್ರದೇಶ ಠೇವಣಿದಾರರ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 4 ಮತ್ತು 6(1) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

    ಆರೋಪಿಗಳನ್ನು ಹಿಡಿಯಲು ಪೊಲೀಸರಿಗೆ ಸಾಧ್ಯವಾಗದ ಹಿನ್ನೆಲೆ ವಾರಂಟ್ ಹೊರಡಿಸಲಾಗಿದೆ. ಆರೋಪಿಗಳ ಚರ ಮತ್ತು ಸ್ಥಿರ ಆಸ್ತಿಗಳ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಭವಿಷ್ಯದಲ್ಲಿ ಹೂಡಿಕೆದಾರರ ಹಣವನ್ನು ವಸೂಲಿ ಮಾಡಲು ಆಸ್ತಿಗಳನ್ನು ಹರಾಜು ಹಾಕಲು ಮುಂದಾಗಿದ್ದಾರೆ.

Share Post