ಶಾಸಕ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸ್ಕೆಚ್; ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ವಿಡಿಯೊ ಬಹಿರಂಗ
ಬೆಂಗಳೂರು: ಯಲಹಂಕ ಬಿಜೆಪಿ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಸ್ಕೆಚ್ ಹಾಕಿರುವ ವಿಚಾರ ಬಹಿರಂಗವಾಗಿದೆ. ದೇವರಾಜ್ ಎಂಬುವವರ ಜೊತೆ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಈ ಬಗ್ಗೆ ಮಾತನಾಡಿರುವ ವಿಡಿಯೋ ಬಹಿರಂಗವಾಗಿದೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಸ್.ಆರ್.ವಿಶ್ವನಾಥ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೋಪಾಲಕೃಷ್ಣ ಸ್ಪರ್ಧಿಸಿ ಸೋತಿದ್ದರು. ಇವರು ಕಳೆದ 5 ತಿಂಗಳ ಹಿಂದೆ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ ಎನ್ನಲಾಗಿದೆ. ಈ ಸಂಬಂಧ ದೇವರಾಜ್ ಎಂಬುವವರ ಜೊತೆ ಮಾತನಾಡಿದ್ದು, 5 ಕೋಟಿ ರೂಪಾಯಿ ಖರ್ಚಾದರೂ ಪರವಾಗಿಲ್ಲ, ಹೊಡೆದುಹಾಕಿ. ಆಂಧ್ರದಿಂದ ಶಾರ್ಪ್ ಶೂಟರ್‌ಗಳನ್ನು ಕರೆಸಿ ಕೊಲ್ಲಿಸಿ ಎಂದು ಹೇಳಿರುವ ವಿಡಿಯೋ ಬಹಿರಂಗವಾಗಿದೆ. ಇದು ರಾಜಕೀಯವಲದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಬೆಳಗ್ಗೆ ವಿಶ್ವನಾಥ್ ತೋಟಕ್ಕೆ ಒಬ್ಬರೇ ಹೋಗುತ್ತಿರುತ್ತಾರೆ. ಆಗ ಹೊಡೆದುಹಾಕಬಹುದು. ಸ್ಕೆಚ್ ಹಾಕಿದರೆ ಮಿಸ್ ಆಗಬಾರದು ಎಂದು ಗೋಪಾಲಕೃಷ್ಣ ಹೇಳಿರುವ ದೃಶ್ಯ ಕೂಡಾ ವಿಡಿಯೋದಲ್ಲಿದೆ.
ವಿಡಿಯೋ ಬಹಿರಂಗವಾಗುತ್ತಿದ್ದಂತೆ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರ ಅವರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗೃಹಸಚಿವರ ಶಾಸಕ ವಿಶ್ವನಾಥ್ ಅವರಿಗೆ ಹೆಚ್ಚಿನ ಭದ್ರತೆ ನೀಡುವುದಾಗಿ ಹೇಳಿದ್ದಾರೆ.
ಇನ್ನು ಸುದ್ದಿಗೋಷ್ಠಿ ಕರೆದು ಎಲ್ಲಾ ವಿಚಾರ ಬಹಿರಂಗ ಮಾಡುವಂತೆ ಶಾಸಕರಿಗೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್ ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ಕರೆದಿದ್ದಾರೆ.
ಇನ್ನೊಂದೆಡೆ ಪೊಲೀಸರು, ವಿಡಿಯೋ ಚಿತ್ರೀಕರಿಸಿರುವ ಕುಳ್ಳ ದೇವರಾಜ್ ಹಾಗೂ ವಿಡಿಯೋದಲ್ಲಿ ಮಾತನಾಡಿರುವ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಈ ಬಗ್ಗೆ ಹೇಳಿಕೆ ನೀಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ , ಪ್ರಕರಣದ ಬಗ್ಗೆ ತನಿಖೆ ನಡೆಸುತ್ತೇವೆ. ತನಿಖೆ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಆಂಧ್ರದಿಂದ ಬೆಂಗಳೂರಿಗೆ ಶಾರ್ಪ್ ಶೂಟರ್‌ಗಳು ಬಂದಿದ್ದರಾ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.