ಯೂಟ್ಯೂಬನಲ್ಲಿ ನೋಡಿ ಬಾಂಬ್ ತಯಾರಿ; ಈ ಕಾರಣಕ್ಕೇ ಆತ ಬಾಂಬ್ ಇಟ್ಟನಾ..?
ಎರ್ನಾಕುಲಂ; ನಿನ್ನೆ ಕೇರಳದ ಎರ್ನಾಕುಲಂ ಜಿಲ್ಲೆಯ ಕಲಮಸ್ಸೆರಿ ಕನ್ವೆನ್ಷನ್ ಸೆಂಟರ್‌ನಲ್ಲಿ ಮೂರು ಬಾಂಬ್ ಸ್ಫೋಟಗಳು ಸಂಭವಿಸಿದ್ದವು. ಇದರಲ್ಲಿ ಸಾವಿನ ಸಂಖ್ಯೆ ಮೂರಕ್ಕೇರಿದೆ. ಇನ್ನು ಸ್ಫೋಟದ ನಂತರ ಪೊಲೀಸರಿಗೆ ಶರಣಾಗಿರುವ ವ್ಯಕ್ತಿ ಹಲವು ಮಹತ್ವದ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ಆತ ಯೂಟ್ಯೂಬ್ ನೋಡಿ ಬಾಂಬ್ ತಯಾರಿ ಮಾಡಿದ್ದನಂತೆ. ಅದು ಸ್ಫೋಟಗೊಳ್ಳುತ್ತಾ ಇಲ್ಲವಾ ಎಂಬುದನ್ನು ಅವರ ಮನೆ ಬಳಿ ಪರೀಕ್ಷೆಯನ್ನೂ ಮಾಡಿದ್ದನಂತೆ. ಪರೀಕ್ಷೆ ಯಶಸ್ವಿಯಾದ ನಂತರ, ಕಲಮಸ್ಸೆರಿ ಕನ್ವೆನ್ಷನ್ ಸೆಂಟರ್‌ನಲ್ಲಿ ಬಾಂಬ್ ಇಟ್ಟು ಸ್ಫೋಟಿಸಿದ್ದಾನೆ.
ಆರೋಪಿಯ ಹೆಸರು ಡೊಮಿನಿಕ್ ಮಾರ್ಟಿನ್. ಈತ 3000 ರೂ.ಗೆ ಐಇಡಿ ವಸ್ತುಗಳನ್ನು ಖರೀದಿಸಿ ಟಿಫಿನ್ ಬಾಕ್ಸ್ ಗಳಲ್ಲಿ ಬಚ್ಚಿಟ್ಟು ಕನ್ವೆನ್ಷನ್ ಸೆಂಟರ್ ನಲ್ಲಿಟ್ಟಿದ್ದಾಗಿ ಒಪ್ಪಿಕೊಂಡಿದ್ದಾನೆ. ಕನ್ವೆನ್ಷನ್ ಸೆಂಟರ್‌ನಲ್ಲಿ ಅವರು ಹೇಳುವುದೆಲ್ಲಾ ದೇಶದ್ರೋಹ ಎಂದಿರುವ ಆತ, ಈ ಕಾರಣಕ್ಕಾಗಿಯೇ ಸ್ಫೋಟಕ ಇಟ್ಟಿರುವುದಾಗಿ ಆರೋಪಿ ಡೊಮಿನಿಕ್ ಹೇಳಿಕೊಂಡಿದ್ದಾನೆ.
ಬಾಂಬ್‌ಗಳ ಜೊತೆಗೆ ಪೆಟ್ರೋಲ್ ಬಾಂಬ್‌ಗಳನ್ನೂ ತಯಾರಿಸಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಪ್ರಾರ್ಥನೆ ನಡೆಯುತ್ತಿರುವ ಕನ್ವೆನ್ಷನ್ ಸೆಂಟರ್‌ನಲ್ಲಿ ಸುಮಾರು 2000 ಜನರಿದ್ದರು. ಅವರಲ್ಲಿ ಆರೋಪಿಯ ಅತ್ತೆ ಹಾಗೂ ಮತ್ತೊಬ್ಬ ಸಂಬಂಧಿಯೂ ಇದ್ದರು ಎನ್ನಲಾಗಿದೆ. ಇವರಿಬ್ಬರೂ ದಾಳಿಯಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ.