ಟೋಲ್‌ಗೇಟ್ ಮಾಡಲು ಆಗ್ರಹಿಸಿ ಪ್ರತಿಭಟನೆ; ತೀವ್ರ ಸ್ವರೂಪ ಪಡೆದ ಹೋರಾಟ
ಮಂಗಳೂರು; ಸುರತ್ಕಲ್ ಎನ್‌ಐಟಿಕೆ ಬಳಿಯ ಟೋಲ್‌ಗೇಟ್ ತೆರವು ಮಾಡಬೇಕೆಂದು ಆಗ್ರಹಿಸಿ ನೂರಾರು ಪ್ರತಿಭಟನಾಕಾರರು ಟೋಲ್ ಬೂತ್‌ಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ. ಪೊಲೀಸ್ ಸರ್ಪಗಾವಲನ್ನು ಕೂಡಾ ಭೇದಿಸಿ ನುಗ್ಗಿದ ಪ್ರತಿಭಟನಾಕಾರರು, ಘೋಷಣೆಗಳನ್ನು ಕೂಗಿದ್ದಾರೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಟೋಲ್‌ಗೇಟ್ ಸುತ್ತಲೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಭದ್ರತೆಗೆ ನೂರಾರು ಪೊಲೀಸರನ್ನು ನಿಯೋಜಿಸಲಾಗಿತ್ತು. ಆದ್ರೆ ಪೊಲೀಸರನ್ನೂ ತಳ್ಳಿ ಪ್ರತಿಭಟನಾಕಾರರು ಮುನ್ನುಗ್ಗಿದ್ದಾರೆ. ನಂತರ ಅವರು ಟೋಲ್ ಬೂತ್‌ಗಳನ್ನು ಸುತ್ತುವರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕೆಲ ಪ್ರತಿಭಟನಾಕಾರರು ಒಂದು ಬೂತ್‌ನ ಗಾಜನ್ನೂ ಒಡೆದಿದ್ದಾರೆ.
ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಈ ಹೋರಾಟಕ್ಕೆ ಕರೆ ನೀಡಿತ್ತು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಹಲವು ಕಡೆಗಳಿಂದ ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಆಗಮಿಸಿದ್ದರು. ಮೊದಲು ಶಾಂತಿಯುತವಾಗಿಯೇ ಪ್ರತಿಭಟನೆ ಆರಂಭವಾಯಿತು. ಅನಂತರ ಅದು ತೀವ್ರ ಸ್ವರೂಪಕ್ಕೆ ತಿರುಗಿತು. ಹೆದ್ದಾರಿಯಲ್ಲಿ ಕುಳಿತಿದ್ದ ಪ್ರತಿಭಟನಾಕಾರರು ಏಕಾಏಕಿ ಟೋಲ್‌ಗೇಟ್‌ನತ್ತ ನುಗ್ಗಿದರು. ಬ್ಯಾರಿಕೇಡ್‌ಗಳನ್ನು ತಳ್ಳಿದ್ದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.