8ನೇ ಮಹಡಿಯಿಂದ ಕುಸಿಯಿತು ಲಿಫ್ಟ್; 9 ಐಟಿ ಉದ್ಯೋಗಿಗಳು ಗಂಭೀರ
ನವದೆಹಲಿ; ಬಹುಮಹಡಿ ಕಟ್ಟಡವೊಂದರಲ್ಲಿ ಲಿಫ್ಟ್ ಎಂಟನೇ ಮಹಡಿಯಿಂದ ಕುಸಿದಿದ್ದು, ಅದರಲ್ಲಿದ್ದ 9 ಮಂದಿ ಐಟಿ ಉದ್ಯೋಗಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ನೋಯ್ಡಾದಲ್ಲಿ ನಡೆದಿದ್ದು, ಐವರ ಕೈ ಕಾಲುಗಳಿಗೆ ಗಂಭೀರವಾಗಿ ಗಾಯಗಳಾಗಿವೆ.
ನೋಯ್ಡಾ ಸೆಕ್ಟರ್ 125 ರ ರಿವರ್ ಸೈಡ್ ಟವರ್ ನಲ್ಲಿರುವ ಲಿಫ್ಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಈ ದುರ್ಘಟನೆ ನಡೆದಿದೆ. ಪಿಯೂಷ್ ಶರ್ಮಾ (22), ಅಭಿಷೇಕ್ ಪಂಡಿತ್ (23), ಅಭಿಷೇಕ್ ಗುಪ್ತಾ (24), ಸೌರಭ್ ಕಟಿಯಾ (28), ರಜತ್ ಶರ್ಮಾ (29), ಶುಭಂ ಭಾರದ್ವಾಜ್ (22), ಯಶು ಶರ್ಮಾ (23), ಸಾಗರ್ (23) ಮತ್ತು ಅಭಿಜೀತ್ ಸಿಂಗ್ (23) ಗಾಯಗೊಂಡವರು.
ಎಲ್ಲರೂ ಈ ಕಟ್ಟಡದ ಎರಾಸ್ಮಿತ್ ಟೆಕ್ನಾಲಜೀಸ್‍ನ ಉದ್ಯೋಗಿಗಳಾಗಿದ್ದು ನಿನ್ನೆ ಕೆಲಸ ಮುಗಿಸಿ ಮನೆಗೆ ಹೊರಡಲು ಲಿಫ್ಟ್ ಹತ್ತಿದ್ದರು. ಎಂಟನೇ ಮಹಡಿಯಲ್ಲಿ ಕಚೇರಿ ಇದ್ದು, ಅಲ್ಲಿ ಲಿಫ್ಟ್ ಹತ್ತಿದ್ದಾರೆ. ಗ್ರೌಂಡ್ ಫ್ಲೋರ್‌ಗೆ ಲಿಫ್ಟ್ ಬಟನ್ ಒತ್ತಿದಾಗ ಅದು ಏಕಾಏಕಿ ಕುಸಿದಿದೆ.
ಒಂಬತ್ತು ಮಂದಿಯಲ್ಲಿ ಐದು ಮಂದಿಗೆ ತೀವ್ರ ಗಾಯಗಳಾಗಿವೆ. ಉಳಿದಿಬ್ಬರ ಸ್ಥಿತಿಯೂ ಗಂಭೀರವಾಗಿದೆ. ಏಳೂ ಮಂದಿಯನ್ನು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಿಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.