ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗೆ ಚಾಕು ಇರಿತ!
ವಾಷಿಂಗ್ಟನ್; ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನಿಗೆ ಚಾಕುವಿನಿಂದ ಇರಿಯಲಾಗಿದೆ. ಇಂಡಿಯಾನಾ ರಾಜ್ಯದ ಫಿಟ್‌ನೆಸ್ ಸೆಂಟರ್ ಒಂದರಲ್ಲಿ ಈ ದುರ್ಘಟನೆ ನಡೆದಿದೆ. ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದ್ದು, ಜೀವ ರಕ್ಷಕ ವ್ಯವಸ್ಥೆ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
24 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿ ಪಿ.ವರುಣ್ ರಾಜ್ ಅವರೇ ದಾಳಿಗೊಳಗಾದವರು. ಇವರು ಅಮೆರಿದಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಓದುತ್ತಿದ್ದರು ಎಂದು ತಿಳಿದುಬಂದಿದೆ. ಜೋರ್ಡಾನ್ ಆಂಡ್ರೇಡ್ (24) ಎಂಬಾತ ಕಳೆದ ಭಾನುವಾರ ವರುಣ್ ರಾಜ್‌ಗೆ ಚಾಕುವಿನಿಂದ ಇರಿದು ತೀವ್ರ ಹಲ್ಲೆ ನಡೆಸಿದ್ದಾರೆ. ಸದ್ಯ ವರುಣ್ ರಾಜ್ ಅವರಿಗೆ ಫೋರ್ಟ್ ವೇನ್‌ನಲ್ಲಿರುವ ಲುಥೆರನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವರುಣ್ ರಾಜ್ ಅವರಿಗೆ ಚಾಕುವಿನಿಂದ ಇರಿದಿದ್ದರಿಂದಾಗಿ ಅವರ ಪ್ರಮುಖ ನರಗಳಿಗೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಆರೋಪಿ ಜೋರ್ಡಾನ್ ಆಂಡ್ರೇಡ್‌ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.