CrimeInternational

ಒಂದು ಕಾಲದಲ್ಲಿ ಕೆಮ್ಮಿನ ಔಷಧಿಯಾಗಿದ್ದ ಹೆರಾಯಿನ್‌ ಮಾದಕವಸ್ತುವಾಗಿದ್ದು ಹೇಗೆ..?

ಹೆರಾಯಿನ್‌.. ಈ ಹೆಸರು ಕೇಳಿದಾಕ್ಷಣ ಎಲ್ಲರೂ ಬೆಚ್ಚಿಬೀಳ್ತಾರೆ.. ಯಾಕಂದ್ರೆ ಇದೊಂದು ನಿಷಿದ್ಧ ಪದಾರ್ಥ.. ಹೀಗಾಗಿಯೇ ಇದರ ಸಹವಾಸಕ್ಕೆ ಹೋದರೆ ಕಾನೂನು ಕಂಟಕ ಎದುರಾಗಬಹುದು ಅನ್ನೋ ಭಯ ಸಾಕಷ್ಟು ಜನರಲ್ಲಿದೆ.. ಈ ನಡುವೆಯೇ ಹಲವರು ಇದರ ಮತ್ತಿನ ಬಲೆಗೆ ಬಿದ್ದಿದ್ದಾರೆ.. ಬೀಳುತ್ತಿದ್ದಾರೆ ಕೂಡಾ. ಅದರಲ್ಲೂ ಸಿನಿಮಾ ಸ್ಟಾರ್‌ಗಳು, ರಾಜಕಾರಣಿಗಳು ಮಕ್ಕಳು ಡ್ರಗ್ಸ್‌ ನಂಟು ಹೊಂದಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಪತ್ತೆಯಾಗುತ್ತಿದೆ.

ಅಂದಹಾಗೆ ಈಗ ನಮಗೆ ಹೆರಾಯಿನ್‌ ಅಂದಾಕ್ಷಣ ಇದು ಮತ್ತು ಪದಾರ್ಥ ಅನ್ನೋದು ಗೊತ್ತಾಗುತ್ತದೆ. ಇದು ನಮ್ಮ ಭಾರತದಲ್ಲಿ ನಿಷೇಧಿತ ವಸ್ತು ಅನ್ನೋದೂ ಎಲ್ಲರಿಗೂ ಗೊತ್ತಿದೆ. ಆದ್ರೆ ಇದೇ ಹೆರಾಯಿನ್‌ನ್ನು ೧೮ನೇ ಶತಮಾನದ ಅಂತ್ಯದಲ್ಲಿ ಕಾನೂನುಬದ್ಧವಾಗಿ ಲ್ಯಾಬೊರೇಟರಿಗಳಲ್ಲಿ ತಯಾರು ಮಾಡುತ್ತಿದ್ದರು ಅಂದರೆ ನೀವು ನಂಬಲೇಬೇಕು. ಕೆಲವು ವರ್ಷಗಳ ಕಾಲ ಈ ಹೆರಾಯಿನ್‌ ಬಳಸಿ ಕೆಮ್ಮು ಹಾಗೂ ಕತ್ತು ನೋವಿನ ಔಷಧಿ ತಯಾರು ಮಾಡುತ್ತಿದ್ದರು.
ಇದಾದ ನೂರು ವರ್ಷಗಳ ನಂತರ ಹೆರಾಯಿನ್‌ ಒಂದು ನಿಷೇಧಿತ ಡ್ರಗ್‌ ಆಗಿ ಬದಲಾಯಿತು. ಈಗ ಅದನ್ನು ಬಳಸುವುದು ಕಾನೂನು ಪ್ರಕಾರ ಅಪರಾಧ. ಈ ಮತ್ತು ಪದಾರ್ಥವನ್ನು ಅಧಿಕವಾಗಿ ತೆಗೆದುಕೊಂಡರೆ ಪ್ರಾಣವೇ ಹೋಗುವ ಅಪಾಯವಿದೆ. ಈ ಕಾರಣಕ್ಕಾಗಿ ಪ್ರಪಂಚದ ಬಹುತೇಕ ದೇಶಗಳಲ್ಲಿ ಈ ಮತ್ತು ಪದಾರ್ಥವನ್ನು ನಿಷೇಧಿಸಲಾಗಿದೆ. ಅಂದಹಾಗೆ ಕಳೆದ ೨೦ ವರ್ಷಗಳಲ್ಲಿ ಅಮೆರಿಕ ಒಂದರಲ್ಲೇ ೧,೩೦,೦೦೦ಕ್ಕೂ ಹೆಚ್ಚು ಮಂದಿ ಹೆರಾಯಿನ್‌ಗೆ ಬಲಿಯಾಗಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತವೆ. ಹಾಗಾದರೆ, ಒಂದು ಕಾಲದಲ್ಲಿ ಔಷಧಿಯಾಗಿ ಉಪಯೋಗಿಸಲಾಗುತ್ತಿದ್ದ ಹೆರಾಯಿನ್‌ ಆಗಿನ ಕಾಲದಲ್ಲಿ ಹೇಗೆ ತಯಾರು ಮಾಡುತ್ತಿದ್ದರು. ಅನಂತರ ಯಾಕೆ ಅದನ್ನು ನಿಷೇಧ ಮಾಡಿದರು..? ಈ ಪ್ರಶ್ನೆಗಳಿಗೆ ಉತ್ತರ ಹುಡುಕೋಣ.

ಹೆರಾಯಿನ್‌ ಮೊದಲು ಹೇಗೆ ತಯಾರಾಯಿತು..?
ಹೆರಾಯಿನ್‌ನ ರಾಸಾಯನಿಕ ಹೆಸರು ಡಯಾಸಿಟೈಲ್ಮಾರ್ಫಿನ್‌.. ಇದರ ತಯಾರಿಗೆ ಸಂಬಂಧಿಸಿದಂತೆ ೧೮೭೪ರಲ್ಲಿ ತಯಾರಾದ ಒಂದು ವರದಿಯಲ್ಲಿ ಮೊದಲ ಬಾರಿಗೆ ಪ್ರಸ್ತಾಪ ಮಾಡಲಾಗಿದೆ. ಲಂಡನ್‌ನ ಸೇಂಟ್‌ ಮೇರೀಸ್‌ ಹಾಸ್ಪಿಟಲ್‌ ಸ್ಕೂಲ್‌ ಆಫ್‌ ಮೆಡಿಸಿನ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿ.ಆರ್‌.ಎ.ರೈಟ್‌ ಎಂಭ ಇಂಗ್ಲೀಸ್‌ ರಸಾಯನ ಶಾಸ್ತ್ರಜ್ಞ ಇದನ್ನು ಮಾರ್ಫಿನ್‌ನಿಂದ ಶೇಖರಿಸುತ್ತಾನೆ. ʻಓಪಿಎಂ, ಮಾರ್ಫಿನ್‌ನ್ನು ಅದಾಗಲೇ ಔಷಧಿಯಾಗಿ ಉಯೋಗಿಸುತ್ತಿದ್ದರುʼ ಎಂದು ವೈದ್ಯಶಾಸ್ತ್ರಜ್ಞ ಹಾಗೂ ಬಫೆಲ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ಡೇವಿಡ್‌ ಹರ್ಜ್‌ಬರ್ಗ್‌ ಹೇಳಿದ್ದಾರೆ.
ʻಈ ಪದಾರ್ಥಗಳನ್ನು ಬಳಸುವುದು ಒಂದು ವ್ಯಸನವಾಗಿ ಬದಲಾಗುತ್ತದೆ. ಈಗಾಗಲೇ ಅದು ತುಂಬಾನೇ ನಡೆಯುತ್ತಿದೆ. ಆದ್ದರಿಂದ, ಫಾರ್ಮಾ ಕಂಪನಿಗಳು ವ್ಯಸನಕ್ಕೆ ಕಾರಣವಾಗದ ನೋವು ನಿವಾರಕ ಔಷಧಿಗಳ ತಯಾರಿಗೆ ಅವುಗಳನ್ನು ಉಪಯೋಗಿಸುತ್ತಿದ್ದರು ಎಂದು ತಜ್ಞರು ಹೇಳುತ್ತಾರೆ. ಹೆರಾಯಿನ್‌ಗೆ ಪ್ರಜೆಗಳು ದಾಸರಾಗುತ್ತಾರೆಂಬುದು ನಿಜವಲ್ಲ, ಅವುಗಳಿಂದ ಸೈಡ್‌ ಎಫೆಕ್ಟ್ಸ್‌ ಕಡಿಮೆ ಇರುತ್ತವೆ ಎಂದು ಪ್ರಾರಂಭದಲ್ಲಿ ಕೆಲವರು ವಾದ ಮಾಡುತ್ತಿದ್ದರು. ʻಟಿಬಿ ರೋಗಿಗಳಿಗೆ ಹೆರಾಯಿನ್‌ ನಿಂದ ಒಳ್ಳೆಯ ಫಲಿತಾಂಶ ಸಿಕ್ಕಿದೆ. ಇದು ಕೆಮ್ಮು ವಾಸಿ ಮಾಡುವುದರಲ್ಲಿ ಸಹಕಾರಿಯಾಗಿದೆ. ರೋಗಿ ನಿದ್ರೆ ಹೋಗುವುದಕ್ಕೂ ಸಹಕರಿಸುತ್ತದೆʼಎಂದು ೨೦೨೦ರ ಜೂನ್‌ನಲ್ಲಿ ʻದಿ ಕಾನ್ವರ್ಜೇಷನ್‌ʼ ಜರ್ನಲ್‌ನಲ್ಲಿ ಯೂನಿವರ್ಸಿಟಿ ಪ್ರೊಫೆಸರ್‌ ಒಬ್ಬರು ಬರೆದುಕೊಂಡಿದ್ದರು.

ಆದರೂ, ಹೆರಾಯಿನ್‌ ತಯಾರಿಸಿದ ಮೊದಲ ದಿನಗಳಲ್ಲಿ ವೈದ್ಯಕೀಯವಾಗಿ ಅದಕ್ಕೆ ದೊಡ್ಡ ಮಟ್ಟದಲ್ಲಿ ಪ್ರಾಧಾನ್ಯತೆ ಏನೂ ಸಿಗಲಿಲ್ಲ. ೧೮೯೭ವರೆಗೂ ಹೀಗೆಯೇ ಸಾಗಿತ್ತು. ಅದೇ ಸಮಯದಲ್ಲಿ ಜರ್ಮನ್‌ ಫಾರ್ಮಾ ಸಂಸ್ಥೆ ಬೇಯರ್‌ ಕಂಪನಿ ಪರವಾಗಿ ಮಾರ್ಫಿನ್‌, ಕೋಡೈನ್‌ ಡ್ರಗ್ಸ್‌ ಸ್ಥಾನದಲ್ಲಿ ಮತ್ತೊಂದು ಡ್ರಗ್‌ಗಾಗಿ ಪ್ರೊಫೆಸರ್‌ ಹೆನ್ರಿಚ್‌ ಡ್ರೆಸ್ಸರ್‌ ನೇತೃತ್ವದ ತಂಡ ಸಂಶೋಧನೆಯಲ್ಲಿ ತೊಡಗಿತ್ತು. ಈ ಬದಲಾವಣೆಯಿಂದಾಗಿ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ತೊಂದರೆಗೊಳಗಾಗಿರುವವರಿಗೆ ಉಪಶಮನ ಲಭಿಸುತ್ತದೆ ಎಂಬುದು ಅವರ ವಾದವಾಗಿತ್ತು.
ಈ ವಿಚಾರ ಬೇಯರ್‌ ಲೆವರ್ಕ್‌ ಸೆನ್‌ ಆರ್ಕೈವ್‌ ಪತ್ರಗಳ ಮೂಲಕ ಗೊತ್ತಾಗಿದೆ. ಸಂಶೋಧನಾ ತಂಡದಲ್ಲಿನ ಓರ್ವ ಸದಸ್ಯ ಮಾರ್ಫಿನ್‌, ಕೋಡೈನ್‌ಗೆ ಬದಲಾಗಿ ಡಯಾಸಿಟೈಲ್‌ ಮಾರ್ಫಿನ್‌ನ್ನು ಉಪಯೋಗಿಸಬೇಕೆಂದು ಪ್ರತಿಪಾದನೆ ಮಾಡುತ್ತಾನೆ. ಅದನ್ನು ಮೊದಲು ಪ್ರಾಣಿಗಳ ಮೇಲೆ, ನಂತರ ಬೇಯರ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಮೇಲೆ, ಅನಂತರ ಬೆರ್ಲಿನ್‌ನಲ್ಲಿನ ವ್ಯಕ್ತಿಗಳ ಮೇಲೆ ಪ್ರಯೋಗ ಮಾಡಲಾಯಿತು.

ಇದು ಕೆಮ್ಮು ನಿವಾರಕ..!
ಡಯಾಸಿಟೈಲ್‌ ಮಾರ್ಫಿನ್‌ ಕೆಮ್ಮಿನ ವಿರುದ್ಧ ಅತ್ಯಂತ ಪರಿಣಾಮಾರಿಯಾಗಿ ಕೆಲಸ ಮಾಡುತ್ತದೆಂದು, ಆ ಸಮಸ್ಯೆಯನ್ನು ಉಪಶಮನ ಮಾಡುತ್ತದೆಂದು ಸಂಶೋಧನೆಯಲ್ಲಿ ಗೊತ್ತಾಗುತ್ತದೆ. ಆಗಿನ ಕಾಲದಲ್ಲಿ ಇದನ್ನು ʻಹೆರಾಯಿನ್‌ ಡ್ರಗ್‌ʼ ಎಂದು ಕರೆಯುತ್ತಿದ್ದರು. ೧೮೯೮ರಲ್ಲಿ ಬೇಯರ್‌ ಕಂಪನಿ ಡಯಾಸಿಟೈಲ್‌ ಮಾರ್ಫಿನ್‌ನ್ನು ಪ್ರಮುಖ ಪದಾರ್ಥವಾಗಿ ಉಪಯೋಗಿಸಿತು. ಕೆಮ್ಮು ವಾಸಿ ಮಾಡುವ ಔಷಧಿಯನ್ನು ತಯಾರುಮಾಡುವುದಕ್ಕೆ ಶುರು ಮಾಡುತ್ತದೆ. ಈ ಔಷಧಿಗೆ ಹೆರಾಯಿನ್‌ ಎಂದು ಹೆಸರಿಡಲಾಗುತ್ತದೆ.

ಪುಡಿ ರೂಪದಲ್ಲಿ ಸಿಗುತ್ತಿತ್ತು ಹೆರಾಯಿನ್‌ ಔಷಧಿ..!
ಪುಡಿ ರೂಪದಲ್ಲಿ ೧ ಗ್ರಾಂ, ೫ ಗ್ರಾಂ, ೧೦ ಗ್ರಾಂ ಹಾಗೂ ೨೫ ಗ್ರಾಂಗಳ ಡೋಸ್‌ಗಳು ಸಿಗುತ್ತಿದ್ದವು. ನಂತರ ಅದನ್ನು ಸಿರಫ್‌ ರೀತಿಯಲ್ಲಿ ರೋಗಿಗಳಿಗೆ ನೀಡಲಾಗುತ್ತಿತ್ತು. ಅನಂತರ ಮಾತ್ರೆಗಳ ರೂಪದಲ್ಲಿ, ಚಪ್ಪರಿಸುವ ಬಿಲ್ಲೆ ಹೀಗೆ ನಾನಾ ರೂಪದಲ್ಲಿ ಕೂಡಾ ಬರೋದಕ್ಕೆ ಶುರುವಾಯ್ತು. ಕ್ಷಯ, ನ್ಯುಮೋನಿಯಾ, ಬ್ರಾಂಕೈಟಿಸ್‌ ಮತ್ತಿತರ ವ್ಯಾಧಿಗಳಿಂದ ಬರುವ ಕೆಮ್ಮನ್ನು ಕಡಿಮೆ ಮಾಡುವುದಕ್ಕೆ ಈ ಡ್ರಗ್‌ ಉಪಯೋಗಿಸುತ್ತಿದ್ದರು. ಇದು ಪರಿಣಾಮಕಾರಿಯಾಗಿ ಕೂಡಾ ಕೆಲಸ ಮಾಡುತ್ತಿತ್ತು.
ಬೇಯರ್ಸ್‌ ಲೆವರ್ಕುಸೆನ್‌ ಆರ್ಕೈವ್‌ನಲ್ಲಿ ಪತ್ತೆಯಾದ ದಾಖಲೆಗಳ ಪ್ರಕಾರ, ೧೮೯೯ರ ವೇಳೆಗೆ ಈ ಕಂಪನಿ ೨೦ಕ್ಕೂ ಹೆಚ್ಚು ದೇಶಗಳಲ್ಲಿ ಹೆರಾಯಿನ್‌ ಮಾರಾಟ ಮಾಡುತ್ತಿತ್ತು. ಹೆರ್ಜ್‌ಬರ್ಗ್‌, ಹಾಂಫ್ರೀಸ್‌ ಅಭಿಪ್ರಾಯದ ಪ್ರಕಾರ ಅಮೆರಿಕದಲ್ಲಿ ಹೆರಾಯಿನ್‌ನ್ನು ಕೌಂಟರಗಳಲ್ಲಿ ಮಾರಾಟ ಮಾಡುತ್ತಿದ್ದರು. ಮಕ್ಕಳು ಕೂಡಾ ಇದನ್ನು ಖರೀದಿಸಿ ಬಳಸಲು ಅವಕಾಶವಿತ್ತು.

೧೯೧೪ನೇ ವರ್ಷದವರೆಗೂ ಹೆರಾಯಿನ್‌ ಬಳಸುವುದಕ್ಕೆ ರೋಗಿಗಳಿಗೆ ವೈದ್ಯರ ಪ್ರಿಸ್ಕ್ರಿಪ್ಷನ್‌ ಕೂಡಾ ಅವಶ್ಯಕತೆ ಇರಲಿಲ್ಲ. ಆ ಸಮಯಕ್ಕೆ ಅಮೆರಿಕದಲ್ಲಿ ಹಾರಿಸನ್‌ ನಾರ್ಕೋಟಿಕ್ಸ್‌ ಕಾನೂನನ್ನು ಜಾರಿಗೆ ತಂದಿರಲಿಲ್ಲ. ಹೆರಾಯಿನ್‌ ಕೆಮ್ಮನ್ನು ಕಡಿಮೆ ಮಾಡುವುದೇ ಅಲ್ಲದೆ, ಮಾರ್ಫಿನ್‌, ಅಲ್ಕೊಹಾಲ್‌ ವ್ಯಸನಗಳ ಚಿಕಿತ್ಸೆಗೆ ಕೂಡಾ ಉಪಯೋಗವಾಗುತ್ತದೆಂದು ತಜ್ಞರೊಬ್ಬರು ಹೇಳಿದ್ದರು. ಆದರೆ, ಕೆಲವೇ ವರ್ಷಗಳ ನಿಜ ಏನೆಂಬುದು ತಜ್ಞರಿಗೆ ಅರ್ಥವಾಗಿತ್ತು. ಹೀಗಾಗಿ ಈ ಹೆರಾಯಿನ್‌ ಔಷಧ ಬಳಕೆಯನ್ನು ಕಡಿಮೆ ಮಾಡಬೇಕೆಂದು ತಜ್ಞರು ನಿರ್ಧಾರ ಮಾಡಿದ್ದರು.

ವ್ಯಸನವಾಗಿ ಬದಲಾಗುವ ಅಪಾಯ ಅರಿತ ತಜ್ಞರು..!
ಹೆರಾಯಿನ್‌ ಮಾರುಕಟ್ಟೆ ವ್ಯವಸ್ಥೆಗೆ ಅನುಮತಿ ನೀಡುವ ಮೊದಲು, ಇದು ಒಂದು ವ್ಯಸನವಾಗಿ ಬದಲಾಗುವ ಅಪಾಯ ಇದೆ ಎಂದು ಆತಂಕಗಳು ವ್ಯಕ್ತವಾದವು. ರೋಗಿಗಳು ಅಧಿಕವಾಗಿ ಹೆರಾಯಿನ್‌ ಡ್ರಗ್‌ ತೆಗೆದುಕೊಳ್ಳುವುದರಿಂದ ಅವರು ಅದಕ್ಕೆ ದಾಸರಾಗುತ್ತಿದ್ದಾರೆಂದು ವೈದ್ಯರು, ಫಾರ್ಮಾಸಿಸ್ಟ್‌ಗಳು ಗ್ರಹಿಸಿದ್ದರು.

ಹೆರಾಯಿನ್‌ನ್ನು ಯಾಕೆ ನಿಷೇಧ ಮಾಡಿದರು..?
೨೦ನೇ ಶತಮಾನದ ಆರಂಭದಲ್ಲಿ ಸಾಕಷ್ಟು ಮಂದಿ ಅಪರಾಧಿಗಳು ಈ ಹೆರಾಯಿನ್‌ನ್ನು ಬಳಸುವುದಕ್ಕೆ ಶುರು ಮಾಡಿದ್ದರು. ಅದೂ ಔಷಧಿಯಾಗಿ ಅಲ್ಲದೇ, ಮತ್ತು ಪದಾರ್ಥವಾಗಿ ಬಳಸುತ್ತಿದ್ದರು. ಈ ಕಾರಣದಿಂದಾಗಿ ಈ ಡ್ರಗ್‌ ಮೇಲೆ ನಿಷೇಧ ಹೇರಬೇಕಾದ ಪರಿಸ್ಥಿತಿ ಎದುರಾಯಿತು. ೧೯೧ರ ವೇಳೆಗೆ ವೈದ್ಯೇತರ ಉಪಯೋಗಕ್ಕೆ ಹೆರಾಯಿನ್‌ ಬಳಸುತ್ತಿರುವುದು ಬಯಲಾಗಿತ್ತು. ಆಗಿನಿಂದಲೇ ಇದರ ವಿರುದ್ಧದ ಹೋರಾಟಗಳು, ಹೇಳಿಕೆಗಳು ಶುರುವಾಗಿದ್ದವು.

ಅಪರಾಧ ಪ್ರಪಂಚಕ್ಕೆ ಇದು ಪರಿಚಯವಾಗಿದ್ದು ಹೇಗೆ..?

ʻವನ್‌ ಹಂಡ್ರೆಡ್‌ ಇಯರ್ಸ್‌ ಆಫ್‌ ಹೆರಾಯಿನ್‌ʼ ಎಂಬ ಸಂಚಿಕೆಯಲ್ಲಿ ಇದಕ್ಕೆ ಸಂಬಂಧಿಸಿದ ಒಂದು ಮಾಹಿತಿ ಬಯಲಾಗಿತ್ತು. ದೇಶದಲ್ಲಿನ ಜೈಲುಗಳಲ್ಲಿ ಕೆಲ ಕೈದಿಗಳು ಕೆಮ್ಮಿಗಾಗಿ ಹೆರಾಯಿನ್‌ ಉಪಯೋಗಿಸಿದರೆಂದೂ, ನಂತರ ಇತರ ಕೈದಿಗಳನ್ನೂ ಈ ಹೆರಾಯಿನ್‌ ಆಕರ್ಷಿಸಿತೆಂದೂ ಆ ವರದಿಯಲ್ಲಿ ಬಂದಿತ್ತು. ಅನಂತರ ಜೈಲಿನ ಹೊರಗಡೆ ಕೂಡಾ ಹೆರಾಯಿನ್‌ನ್ನು ಮತ್ತು ಪದಾರ್ಥವಾಗಿ ಉಪಯೋಗಿಸಲು ಶುರುವಾಯ್ತು. ಹೀಗಾಗಿ, ಪ್ರಪಂಚದ ಬಹತೇಕ ದೇಶಗಳಲ್ಲಿ ಹೆರಾಯಿನ್ ಒಂದು ಮತ್ತು ಪದಾರ್ಥ ಎಂದು ತಿರ್ಮಾನಕ್ಕೆ ಬರಲಾಯಿತು. ಜೊತೆಗೆ ಅದರ ಬಳಕೆಯನ್ನು ನಿಷೇಧಿಸಲಾಯಿತು. ಭಾರತದಲ್ಲೂ ಹೆರಾಯಿನ್‌ ಬಳಕೆಗೆ ನಿಷೇಧ ಇದೆ. ಆದರೂ, ಕೆಲವರು ಕಳ್ಳತನವಾಗಿ ಹೆರಾಯಿನ್‌ ಬಳಕೆ ಮಾಡುತ್ತಿದ್ದಾರೆ. ಅದರಲ್ಲೂ ಸಿರಿವಂತರೇ ಹೆಚ್ಚಾಗಿ ಹೆರಾಯಿನ್‌ ಸೇರಿ ಹಲವು ಡ್ರಗ್ಸ್‌ ಬಳಕೆ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವು ಪ್ರಮುಖರು ಹಾಗೂ ಅವರ ಮಕ್ಕಳೇ ಸಿಕ್ಕಿಬಿದ್ದಿದ್ದನ್ನು ನಾವು ಗಮನಿಸಬಹುದು.

Share Post