ಗ್ರಾಹಕರ ನಕಲಿ ದಾಖಲೆ ಬಳಸಿ ಕೋಟಿ ಕೋಟಿ ವಂಚನೆ
ಹಾವೇರಿ; ಮೈಕ್ರೋಫೈನಾನ್ಸ್ ಒಂದರ ಮ್ಯಾನೇಜರ್ ಹಾಗೂ ಕ್ಯಾಶಿಯರ್ ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಪ್ತಕರಣ ಬೆಳಕಿಗೆ ಬಂದಿದೆ. ಗ್ರಾಹಕರ ನಕಲಿ ದಾಖಲೆಗಳನ್ನು ಬಳಸಿ ಕೋಟ್ಯಂತರ ರೂಪಾಯಿ ಸಾಲ ಪಡೆದು ವಂಚಿಸಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ಈ ಘಟನೆ ನಡೆದಿದೆ.
ಇಲ್ಲಿನ ಮೈಕ್ರೋಫೈನಾನ್ಸ್ ಒಂದರ ಕ್ಯಾಶಿಯರ್ ಶಿವಾನಂದಪ್ಪ ಹಾಗೂ ಮ್ಯಾನೇಜರ್ ಬಸವರಾಜಯ್ಯ ವಿರುದ್ಧ ಈ ಆರೋಪ ಕೇಳಿಬಂದಿದೆ. ಗ್ರಾಮೀಣ ಮಹಿಳೆಯರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಾಲ ನೀಡಿದ್ದೇವೆ ಎಂದು ತೋರಿಸಿದ್ದಾರೆ. ಈ ಮೂಲಕ ಸುಮಾರು 4 ಕೋಟಿ 16 ಲಕ್ಷದ 14000 ರೂಪಾಯಿ ಹಣವನ್ನು ಮಹಿಳೆಯರ ಹೆಸರಲ್ಲಿ ಸಾಲ ಪಡೆದು ವಂಚಿಸಲಾಗಿದೆ.
ಮೈಕ್ರೋಫೈನಾನ್ಸ್ ಶಾಖೆಯಲ್ಲಿ ಒಂದು ಲೆಕ್ಕ ಹಾಗೂ ಕೇಂದ್ರ ಕಚೇರಿಯಲ್ಲಿ ಮತ್ತೊಂದು ಹಣಕಾಸು ಲೆಕ್ಕಾಚಾರ ತೋರಿಸಿದ್ದಾರೆ. ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ವಂಚನೆ ಬಯಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.