ಐಸಿಯುನಲ್ಲಿದ್ದ ವ್ಯಕ್ತಿ ಮೇಲೆ ಆಸ್ಪತ್ರೆ ಸಿಬ್ಬಂದಿಯಿಂದ ರಕ್ತ ಬರುವಂತೆ ಹಲ್ಲೆ!
ಬೆಂಗಳೂರು; ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯ ಮೇಲೆ ಆಸ್ಪತ್ರೆ ಸಿಬ್ಬಂದಿಯೇ ರಕ್ತ ಬರುವಂತೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.. ನೆಲಮಂಗಲ ಮೂಲದ ವೆಂಕಟೇಶ್ ಎಂಬುವವರ ಮೇಲೆ ವಾರ್ಡ್ ಬಾಯ್ ಧನಂಜಯ್ ಹಿಗ್ಗಾಮುಗ್ಗಾ ಥಳಿಸಿದ್ದಾನೆ ಎಂದು ಆರೋಪಿಸಲಾಗಿದೆ.. ಚಿಕಿತ್ಸೆ ವೇಳೆ ಕೂಗಾಡಿದ ಎಂಬ ಕಾರಣಕ್ಕೆ ಈ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದ್ದು, ರೋಗಿಯ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ..
ನೆಲಮಂಗಲ ಮೂಲದ ವೆಂಕಟೇಶ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.. ಅವರನ್ನು ಕೆಸಿಸಿ ಜನರಲ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.. ಈ ವೇಳೆ ಆಸ್ಪತ್ರೆ ಸಿಬ್ಬಂದಿ, ವಾರ್ಡ್ ಬಾಯ್ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗಿದೆ..
ಆದ್ರೆ ಆಸ್ಪತ್ರೆ ಅಧೀಕ್ಷಕಿ ಇಂದಿರಾ ಮಾತ್ರ ಈ ಆರೋಪವನ್ನು ಅಲ್ಲಗಳೆಯುತ್ತಿದ್ದಾರೆ.. ಹಲ್ಲೆ ನಡೆದಿದೆ ಎಂಬುದನ್ನು ನಾನು ಒಪ್ಪುವುದಕ್ಕೆ ಆಗುತ್ತಿಲ್ಲ ಎಂದಿದ್ದಾರೆ.. ರೋಗಿ ಮೊದಲು ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇಲ್ಲಿಗೆ ಬಂದು ದಾಖಲಾಗಿದ್ದರು.. ವಿಷ ಕುಡಿದವರು ಚಿಕಿತ್ಸೆ ಕೊಡುವಾಗ ಒಮ್ಮೊಮ್ಮೆ ವ್ಯತಿರಿಕ್ತವಾಗಿ ವರ್ತನೆ ಮಾಡುತ್ತಾರೆ.. ಆಗ ಅವರನ್ನು ಕಂಟ್ರೋಲ್ ಮಾಡೋದು ಕಷ್ಟ ಎಂದು ಅವರು ಹೇಳಿದ್ದಾರೆ..
ಹಲ್ಲೆ ನಡೆದಿದೆ ಎಂಬುದನ್ನು ನಾನು ನಂಬೋಕೆ ಆಗ್ತಿಲ್ಲ.. ನಮ್ಮ ಸಿಬ್ಬಂದಿ ಧನಂಜಯ್ ಎರಡನೇ ಶಿಫ್ಟ್‌ನಲ್ಲಿದ್ದಾರೆ.. ಅವರು ಬಂದ ಮೇಲೆ ರೋಗಿಯ ಸಂಬಂಧಿಗಳ ಮುಂದೆಯೇ ವಿಚಾರಣೆ ಮಾಡುತ್ತೇನೆ ಎಂದು ಅಧೀಕ್ಷಕಿ ಹೇಳಿದ್ದಾರೆ..
ಆದ್ರೆ ರೋಗಿಯ ಸಂಬಂಧಿಗಳು ಮಾತ್ರ ರೋಗಿ ಕೂಗಾಡುತ್ತಿದ್ದರು.. ಆಗ ಆಸ್ಪತ್ರೆ ಸಿಬ್ಬಂದಿ ರೋಗಿಯ ಬಾಯಿ, ಮೂಗಿನ ಮೇಲೆ ಹಲ್ಲೆ ಮಾಡಿದ್ದಾರೆ.. ಇದರಿಂದಾಗಿ ರಕ್ತ ಕೂಡಾ ಬಂದಿದೆ ಎಂದು ಆರೋಪ ಮಾಡಿದ್ದಾರೆ.. ಇನ್ನು ಏನು ನಡೆದಿದೆ ಎಂದು ಪರಿಶೀಲಿಸಲು ಆಸ್ಪತ್ರೆಯಲ್ಲಿ ಸಿಸಿಟಿವಿ ಕೆಲಸ ಮಾಡುತ್ತಿಲ್ಲ.. ಹೀಗಾಗಿ ಇದರಲ್ಲಿ ಯಾರು ಹೇಳಿದ್ದು ಸರಿ, ಯಾರದು ತಪ್ಪು ಅನ್ನೋದು ಗೊತ್ತಾಗುತ್ತಿಲ್ಲ.. ಇನ್ನೊಂದೆಡೆ ರೋಗಿಯ ಮೈಮೇಲೆ ಗಾಯಗಳೂ ಆಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ..