CrimeNational

ಹೈದರಾಬಾದ್‌ನಲ್ಲಿ ಬೆಂಕಿ ದುರಂತ; ಆರು ಮಂದಿ ದಾರುಣ ಸಾವು

ಹೈದರಾಬಾದ್‌; ತೆಲಂಗಾಣದ ಸಿಕಂದರಾಬಾದ್‌ನ ಸ್ವಪ್ನಾಲೋಕ್ ಕಾಂಪ್ಲೆಕ್ಸ್‌ನಲ್ಲಿ ಸಂಭವಿಸಿದ ಬೆಂಕಿಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಗಾಂಧಿ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಸ್ವಪ್ನಲೋಕ ಕಾಂಪ್ಲೆಕ್ಸ್‌ನ ಮೂರನೇ ಮಹಡಿಯಲ್ಲಿ ಗುರುವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ವೇಗವಾಗಿ ವ್ಯಾಪಿಸಿದೆ. ಆಗ ಅಲ್ಲಿ ಕೆಲವರು ಕೆಲಸ ಮಾಡುತ್ತಿದ್ದರು.

ಸ್ವಪ್ನಲೋಕದ ಅಕ್ಕಪಕ್ಕದ ಅಪಾರ್ಟ್‌ಮೆಂಟ್‌ಗಳಿಗೂ ಬೆಂಕಿ ತಗುಲಿದೆ. ಮೃತ ಆರು ಮಂದಿಯಲ್ಲಿ ನಾಲ್ವರು ಯುವತಿಯರು ಹಾಗೂ ಇಬ್ಬರು ಯುವಕರು ಇದ್ದಾರೆ.  ಶಿವ , ಪ್ರಶಾಂತ್,  ಪ್ರಮೀಳಾ,  ಶ್ರಾವಣಿ,  ಚಂದ್ರ, ತ್ರಿವೇಣಿ ಮೃತರು ಎಂದು ತಿಳಿದುಬಂದಿದೆ. ಇವರೆಲ್ಲಾ ಸ್ವಪ್ನಲೋಕ ಕಾಂಪ್ಲೆಕ್ಸ್‌ನಲ್ಲಿರುವ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಇದು ಎಂಟು ಅಂತಸ್ತಿನ ಕಟ್ಟಡ. ಬಹಳ ಹಳೆಯ ಕಟ್ಟಡ. ಗುರುವಾರ ಸಂಜೆ 6:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಸಂತ್ರಸ್ತರು ಈ ಕಟ್ಟಡದ 5 ಮತ್ತು 6ನೇ ಮಹಡಿಯಲ್ಲಿ ಸಿಲುಕಿದ್ದರು. ಈ ಮಹಡಿಗಳಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿತ್ತು. ಸುಮಾರು 10 ಅಗ್ನಿಶಾಮಕ ವಾಹನಗಳನ್ನು ಅಧಿಕಾರಿಗಳು ಸ್ವಪ್ನಲೋಕ ಸಂಕೀರ್ಣದಲ್ಲಿ ನಿಯೋಜಿಸಿದ್ದಾರೆ. ಒಂದು ಕಡೆ ಬೆಂಕಿಯನ್ನು ನಿಯಂತ್ರಿಸುವಷ್ಟರಲ್ಲಿ ಒಳಗಿದ್ದವರನ್ನು ಹೊರತರಲಾಯಿತು. ಏಳು ಜನರನ್ನು ರಕ್ಷಿಸಲಾಗಿದೆ ಎಂದು ಉತ್ತರ ವಲಯ ಡಿಸಿಪಿ ಚಂದನಾ ದೀಪ್ತಿ ತಿಳಿಸಿದ್ದಾರೆ. 

Share Post