ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ ಸಾಧ್ಯತೆ
ಇಸ್ಲಾಮಾಬಾದ್ ; ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದು ತಿಳಿಯುತ್ತಿದ್ದಂತೆ ದೇಶಾದ್ಯಂತ ಪ್ರತಿಭಟನೆ ನಡೆಸುವಂತೆ ಪಿಟಿಐ ತನ್ನ ಕಾರ್ಯಕರ್ತರಿಗೆ ಕರೆ ನೀಡಿದೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನ ಸೆಷನ್ಸ್ ನ್ಯಾಯಾಧೀಶ ಝೇಬಾ ಚೌಧರಿ ಅವರನ್ನು ಬೆದರಿಸಿದ ಆರೋಪವನ್ನು ಇಮ್ರಾನ್ ಖಾನ್ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ಸದ್ದಾರ್ ನ್ಯಾಯಾಧೀಶ ಅಲಿ ಜಾವೇದ್ ಭಯೋತ್ಪಾದನೆಯ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಇಮ್ರಾನ್ ಬಂಧಿಸುವ ಸಾಧ್ಯತೆಗಳಿವೆ.
ಎರಡು ದಿನದ ಹಿಂದೆ ಇಮ್ರಾನ್ ಖಾನ್ ಅವರು ಎಫ್9 ಪಾರ್ಕ್ನಲ್ಲಿ ಪಿಟಿಐ ರ್ಯಾಲಿಯನ್ನುದ್ದೇಶಿಸಿ ಭಾಷಣ ಮಾಡಿದ್ದರು. ಇದರ ನಂತರ ಅಂದು ರಾತ್ರಿ 10 ಗಂಟೆ ಸುಮಾರಿಗೆ ಮಾರ್ಗಲ್ಲಾ ಪೊಲೀಸ್ ಠಾಣೆಯಲ್ಲಿ ಇಮ್ರಾನ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಪ್ರತಿಭಟನೆ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಅವರ ಬನಿ ಗಾಲಾ ನಿವಾಸಕ್ಕೆ ಹೋಗುವ ಮಾರ್ಗಗಳನ್ನು ಪೊಲೀಸರು ಬಂದ್ ಮಾಡಲಾಗಿದೆ. ಅನಧಿಕೃತ ವ್ಯಕ್ತಿಗಳು ಈ ಮಾರ್ಗಗಳ ಮೂಲಕ ಪ್ರಯಾಣಿಸುವುದನ್ನು ನಿಷೇಧಿಸಿದ್ದಾರೆ ಎಂದು ವರದಿಯಾಗಿದೆ. ಇಮ್ರಾನ್ ನಿವಾಸಕ್ಕೆ ಹೋಗುವ ಮಾರ್ಗಗಳನ್ನು ಮುಳ್ಳುತಂತಿ ಹಾಕಿ ಬಂದ್ ಮಾಡಲಾಗಿದ್ದು, ಫ್ರಂಟಿಯರ್ ಕಾರ್ಪ್ಸ್ (FC) ನ ದೊಡ್ಡ ತುಕಡಿಗಳನ್ನು ನಿಯೋಜಿಸಲಾಗಿದೆ. ಅಲ್ಲದೆ ಇಮ್ರಾನ್ ಖಾನ್ ಚೌಕ್‌ನ ಬೀದಿ ದೀಪಗಳನ್ನು ಕೂಡ ಬಂದ್ ಮಾಡಲಾಗಿದೆ ಎಂದು ಪಾಕಿಸ್ತಾನದ ಪ್ರಮುಖ ಮಾಧ್ಯಮವೊಂದು ಹೇಳಿದೆ.