ಸದ್ಯಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸುವುದಿಲ್ಲ; ಕೋರ್ಟ್‌ಗೆ ಇಡಿ ಹೇಳಿಕೆ
ನವದೆಹಲಿ; ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸದ್ಯಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸುವುದಿಲ್ಲ ಎಂದು ಇಡಿ ಅಧಿಕಾರಿಗಳು ದೆಹಲಿ ಹೈಕೋರ್ಟ್‍ಗೆ ತಿಳಿಸಿದ್ದಾರೆ. ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ಹೇಳಿಕೆಯನ್ನು ನೀಡಿದ್ದಾರೆ.
ಇಡಿಯಲ್ಲಿ ದಾಖಲಾಗಿರುವ ಎರಡನೇ ದೂರು ರದ್ದುಗೊಳಿಸಬೇಕು ಹಾಗೂ ಬಂಧನ ಮಾಡದಂತೆ ರಕ್ಷಣೆ ನೀಡಬೇಕು ಎಂದು ಕೋರಿ ಡಿ.ಕೆ.ಶಿವಕುಮಾರ್ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಡಿಕೆಶಿ ಪರ ಕಪಿಲ್ ಸಿಬಲ್ ವಾದ ಮಂಡಿಸಿದರು. ಈ ವೇಳೆ ಕೋರ್ಟ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಇಡಿ ಅಧಿಕಾರಿಗಳು ಸದ್ಯಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸುವುದಿಲ್ಲ ಎಂದು ಹೇಳಿದೆ.
ಡಿ.ಕೆ.ಶಿವಕುಮಾರ್ ವಿರುದ್ಧದ ಮೊದಲ ಪ್ರಕರಣದಲ್ಲಿ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಎರಡನೇ ಪ್ರಕರಣವನ್ನು ದಾಖಲಿಸಿ ವಿಚಾರಣೆ ನಡೆಸುವ ಅಗತ್ಯವೇ ಇರಲಿಲ್ಲ. ಯಾಕಂದ್ರೆ ಈ ಪ್ರಕರಣವನ್ನು ಈಗಾಗಲೇ ಸಿಬಿಐ ತನಿಖೆ ನಡೆಸುತ್ತಿದೆ. ಇಡಿ ದಾಖಲಿಸಿರುವ ಎರಡನೇ ಪ್ರಕರಣ ರದ್ದು ಮಾಡಬೇಕು ಹಾಗೂ ಬಂಧನದಿಂದ ರಕ್ಷಣೆ ನೀಡಬೇಕು ಅಂತ ಡಿಕೆಶಿ ಕೋರಿದ್ದರು. ಇಡಿ ಪರ ವಾದ ಮಂಡಿಸಿದ ವಕೀಲರು, ಸದ್ಯಕ್ಕೆ ಡಿ.ಕೆ.ಶಿವಕುಮಾರ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಅವರನ್ನು ಬಂಧಿಸುವ ಪ್ರಯತ್ನ ಮಾಡಿಲ್ಲ ಎಂದು ತಿಳಿಸಿದರು. ಕೋರ್ಟ್ ವಿಚಾರಣೆಯನ್ನು ಡಿಸೆಂಬರ್ 2ಕ್ಕೆ ಮುಂದೂಡಿಕೆ ಮಾಡಿದೆ.