ನೋಟು ಅಮಾನ್ಯೀಕರಣ ವಿಚಾರ; ಇಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ನವದೆಹಲಿ; 2016ರಲ್ಲಿ ಕೇಂದ್ರ ಸರ್ಕಾರ ಸಾವಿರ ಹಾಗೂ ಐದು ನೂರು ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದು ಅರ್ಜಿಗಳ ತೀರ್ಪನ್ನು ಇಂದು ಸುಪ್ರೀಂ ಕೋರ್ಟ್ ಪ್ರಕಟಿಸಲಿದೆ. ಐವರು ನ್ಯಾಯಮೂರ್ತಿಗಳಿರುವ ಸಂವಿಧಾನ ಪೀಠ ಇಂದು ಆದೇಶ ಹೊರಡಿಸಲಿದೆ.
ನೋಟು ಅಮಾನ್ಯೀಕರಣದ ಕಾನೂನು ಸಿಂಧುತ್ವವನ್ನು ಪ್ರಶ್ನಿಸಿ 58 ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿತ್ತು. ಅಮಾನ್ಯೀಕರಣಕ್ಕೆ ಕಾನೂನು ಪ್ರಕಾರದ ಕಾರ್ಯವಿಧಾನ ಅನುಸರಿಸಿಲ್ಲ, ನಾಗರಿಕರ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿತ್ತು.
ಅರ್ಜಿದಾರರು ಕೇಂದ್ರ ಸರ್ಕಾರದಿಂದ ಇಂತಹ ಕೃತ್ಯಗಳು ಪುನರಾವರ್ತನೆಯಾಗದಂತೆ ನಿಯಮಗಳನ್ನು ರೂಪಿಸಲು ಕೋರಿದ್ದರು. ಮೂಲಗಳ ಪ್ರಕಾರ, ನೋಟು ರದ್ದತಿ ತೀರ್ಪು ಎರಡು ಪ್ರತ್ಯೇಕ ಅಭಿಪ್ರಾಯಗಳನ್ನು ಹೊಂದುವ ಸಾಧ್ಯತೆಯಿದೆ. ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಬಿವಿ ನಾಗರತ್ನ ಇಬ್ಬರೂ ಪ್ರತ್ಯೇಕ ತೀರ್ಪು ನೀಡುವ ಸಾಧ್ಯತೆಯಿದೆ.