ʻಶಕ್ತಿʼಗುಂದಿದ ಆಟೋ, ಕ್ಯಾಬ್, ಖಾಸಗಿ ಬಸ್ ವ್ಯವಹಾರ; ಜುಲೈ 27ಕ್ಕೆ ಬಂದ್
ಬೆಂಗಳೂರು; ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದ ಎಲ್ಲರೂ ಸರ್ಕಾರಿ ಬಸ್‌ಗಳಲ್ಲೇ ಓಡಾಡುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿರುವುದರಿಂದ ಹೆಚ್ಚಿನ ಮಂದಿ ಆಟೋ, ಕ್ಯಾಬ್ ಹಾಗೂ ಖಾಸಗಿ ಬಸ್‌ಗಳನ್ನು ಬಳಸುತ್ತಿಲ್ಲ. ಇದರಿಂದಾಗಿ ಲಾಸ್ ಆಗುತ್ತಿದೆ ಎಂದು ಆಟೋ, ಕ್ಯಾಬ್ ಹಾಗೂ ಖಾಸಗಿ ಬಸ್‌ಗಳವರು ಪ್ರತಿಭಟನೆಗೆ ಮುಂದಾಗಿದ್ದಾರೆ. ಜುಲೈ 27ರಂದು ಆಟೋ, ಕ್ಯಾಬ್ ಹಾಗೂ ಖಾಸಗಿ ಬಸ್ ಸೇವೆಯನ್ನು ರದ್ದು ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ತೀರ್ಮಾನಿಸಲಾಗಿದೆ.
ಜುಲೈ 26ರ ಮಧ್ಯರಾತ್ರಿಯಿಂದ ಜುಲೈ 27ರ ಮಧ್ಯರಾತ್ರಿಯವರೆಗೆ ಬೆಂಗಳೂರಿನಲ್ಲಿ ಹಾಗೂ ರಾಜ್ಯದಾದ್ಯಂತ ಆಟೋ, ಕ್ಯಾಬ್ ಹಾಗೂ ಖಾಸಗಿ ಬಸ್‌ಗಳ ಸಂಚಾರ ಇರೋದಿಲ್ಲ. ಖಾಸಗಿ ಸಾರಿಗೆಗೆ ಆಗುತ್ತಿರುವ ನಷ್ಟದ ಹಿನ್ನೆಲೆಯಲ್ಲಿ ಖಾಸಗಿ ಸಾರಿಗೆ ವಾಹನಗಳ ಮಾಲೀಕರು ಹಾಗೂ ಚಾಲಕರು ಈ ಪ್ರತಿಭಟನೆಗೆ ಕರೆ ನೀಡಿದ್ದಾರೆ.