ವಿದ್ಯಾರ್ಥಿನಿಯ ಖಾಸಗಿ ವಿಡಿಯೋ ಲೀಕ್ ವಿಚಾರ; ಚಂಡಿಗಢ ವಿವಿಯಲ್ಲಿ ಉದ್ವಿಗ್ನ
ಚಂಡೀಗಢ; ಯುವತಿಯೊಬ್ಬಳು ತನ್ನ ಹಾಸ್ಟೆಲ್ ಸಹಪಾಠಿಗಳು ಸ್ನಾನ ಮಾಡುತ್ತಿರುವ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ತೆಗೆದು ಇತರರಿಗೆ ಹಂಚಿದ್ದಾಳೆ ಎಂಬ ಎಲ್ಲೆಡೆ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮೊಹಾಲಿಯ ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಆರೋಪಿ ವಿದ್ಯಾರ್ಥಿನಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ಘಟನೆಯಿಂದ ವಿದ್ಯಾರ್ಥಿನಿಯರು ರೊಚ್ಚಿಗೆದ್ದಿದ್ದು ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಹುಡುಗಿಯೊಬ್ಬಳು ತಮ್ಮ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದಾಳೆ ಎಂದು ಹಾಸ್ಟೆಲ್ ಹುಡುಗಿಯರು ಆರೋಪಿಸಿದ್ದರು. ಈ ಹಿನ್ನೆಲೆಯನ್ನು ಆರೋಪಿಯನ್ನು ನಾವು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಖಾಸಗಿ ವಿವಿಯ ಕೆಲವು ವಿದ್ಯಾರ್ಥಿನಿಯರು ಆತ್ಮಹತ್ಯೆ ಯತ್ನ ನಡೆಸಿದ್ದಾರೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಮಾಹಿತಿಯನ್ನು ವಿವಿ ಆಡಳಿತ ಮತ್ತು ಮೊಹಾಲಿ ಪೊಲೀಸರು ಅಲ್ಲಗಳೆದಿದ್ದಾರೆ.
ಈ ಕುರಿತು ಪಂಜಾಬ್ ಶಾಲಾ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಮಾತನಾಡಿ, ಪ್ರಕರಣದ ತನಿಖೆ ನಡೆಯುತ್ತಿದೆ. ವಿದ್ಯಾರ್ಥಿಗಳು ಸಂಯಮ ಕಾಪಾಡಬೇಕು ಎಂದು ಮನವಿ ಮಾಡಿದರು. ತಪ್ಪು ಮಾಡಿದವರನ್ನು ಬಿಡುವ ಪ್ರಶ್ನೆಯೇ ಇಲ್ಲ. ಇದು ತುಂಬಾ ಸೂಕ್ಷ್ಮ ವಿಷಯ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಹೆಣ್ಣು ಮಕ್ಕಳು ಮತ್ತು ಸಹೋದರಿಯರ ಗೌರವದ ಪ್ರಶ್ನೆಯಾಗಿದೆ. ಈ ವಿಚಾರದಲ್ಲಿ ನಾವು ಹಾಗು ಮಾಧ್ಯಮದವರೂ ಕೂಡಾ ಎಚ್ಚರಿಕೆ ವಹಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.