ವಿದೇಶಕ್ಕೆ ಹೊರಟಿದ್ದ ನಟಿಗೆ ಏರ್ಪೋರ್ಟ್ ಅಧಿಕಾರಿಗಳಿಂದ ಗೇಟ್ ಪಾಸ್
ಮುಂಬೈ: ಶ್ರೀಲಂಕಾದ ಮಿಸ್ ಯೂನಿವರ್ಸ್, ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ದುಬೈ ಪ್ರಯಾಣ ರದ್ದುಗೊಂಡಿದ್ದು, ಸದ್ಯಕ್ಕೆ ನಟಿ ಭಾರತ ಬಿಟ್ಟು ವಿದೇಶಕ್ಕೆ ಹೋಗದಂತೆ ಜಾರಿ ನಿರ್ದೇಶನಾಲಯ ಆದೇಶಿಸಿದೆ. ಇಷ್ಟಕ್ಕೆಲ್ಲಾ ಕಾರಣ ಉದ್ಯಮಿಗಳಿಗೆ ಬೆದರಿಕೆ ಹಾಕಿ ಸುಮಾರು 200 ಕೋಟಿ ಸುಲಿಗೆ ಮಾಡಿರುವ ವಂಚಕ ಸುಕೇಶ್ ಚಂದ್ರಶೇಖರ್ ಜೊತೆಗಿನ ಫೋಟೋಗಳು ವೈರಲ್ ಆಗಿದ್ದೇ ನಟಿಗೆ ಸಂಕಷ್ಟ ತಂದೊಡ್ಡಿದೆ. ಜಾಕ್ವೆಲಿನ್ ಹಾಗೂ ಸುಕೇಶ್ ಒಟ್ಟಿಗಿರುವ ಹಾಟ್ ಹಾಟ್ ಫೋಟೋಗಳು ನೆಟ್ಟಿಗರಿಗೆ ಆಹಾರವಾಗಿವೆ. 200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ವಂಚಕ ಸುಕೇಶ್ ಜೂನ್ ತಿಂಗಳಲ್ಲಿ ಜೈಲು ಪಾಲಾದಾಗ ಸುಕೇಶ್ ಜೊತೆ ನಟಿ ಡೇಟಿಂಗ್ ಸುದ್ದಿಯನ್ನು ಜಾಕ್ವೆಲಿನ್ ನಿರಾಕರಿಸಿದರು. ಇದೀಗ ವೈರಲ್ ಆಗ್ತಿರುವ ಫೊಟೋಗಳಿಂದ ಜಾಕ್ವೆಲಿನ್ ಪೇಚಿಗೆ ಸಿಲುಕುವಂತಾಗಿದೆ. ವಂಚನೆ ಕೇಸ್ನಲ್ಲಿ ಈಗಾಗಲೇ ಸುಕೇಶ್, ಆತನ ಪತ್ನಿ ಲೀನಾ ಮತ್ತು ಆರು ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ನಟಿಗೆ ಸುಕೇಶ್ ಸುಮಾರ್ 10 ಕೋಟಿಗೂ ಹೆಚ್ಚು ಬೆಲೆ ಬಾಳುವ ಉಡುಗೊರೆ ನೀಡಿರುವುದರಿಂದ ವಿಚಾರಣೆ ಮುಗಿಯುವವರೆಗೂ ನಟಿ ದೇಶ ಬಿಟ್ಟು ಹೋಗುವ ಹಾಗಿಲ್ಲ ಎಂದು ಸುತ್ತೋಲೆ ಹೊರಡಿಸಿದೆ. ಜಾರಿ ನಿರ್ದೇಶನಾಲಯದ ಸುತ್ತೋಲೆಯಂತೆ ಮುಂಬೈ ನಿಲ್ದಾಣದಲ್ಲಿ ಕಾಣಿಸಿಕೊಂಡ ಜಾಕ್ವೆಲಿನ್ ಅವರನ್ನು ಇಮಿಗ್ರೇಷನ್ ಅಧಿಕಾರಿಗಳು ತಡೆದು ಮನೆಗೆ ವಾಪಸ್ ಕಳುಹಿಸಿದ್ದಾರೆ.