ಕಾಂಗ್ರೆಸ್ ಪಕ್ಷ ಸೇರೋದಿಲ್ಲ ಎಂದ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್
ನವದೆಹಲಿ: ಕಾಂಗ್ರೆಸ್ ಪಕ್ಷ ಸೇರುವುದರ ಬಗ್ಗೆ ಸೋನಿಯಾಗಾಂಧಿ ಜೊತೆ ಹಲವು ಸಭೆಗಳನ್ನು ನಡೆಸಿದ್ದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್, ಈಗ ತಾನು ಕಾಂಗ್ರೆಸ್‌ಗೆ ಸೇರುವುದಿಲ್ಲ ಎಂದು ಹೇಳಿಬಿಟ್ಟಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ರಣದೀಪ್ ಸುರ್ಜೆವಾಲಾ ಅವರೇ ಟ್ವೀಟ್ ಮಾಡಿದ್ದಾರೆ.
‘ಪ್ರಶಾಂತ್ ಕಿಶೋರ್ ಅವರೊಂದಿಗೆ ಪ್ರಸ್ತುತ ರಾಜಕೀಯ ಚರ್ಚೆಯ ನಂತರ ಕಾಂಗ್ರೆಸ್ ಅಧ್ಯಕ್ಷರು ಮುಂಬರುವ ಲೋಕಸಭಾ ಚುನಾವಣೆಗೋಸ್ಕರ ‘ಎಂಪವರ್ಡ್ ಆ್ಯಕ್ಷನ್ ಗ್ರೂಪ್ 2024′ ರಚನೆ ಮಾಡಿದ್ದಾರೆ. ನಿರ್ದಿಷ್ಟ ಜವಾಬ್ದಾರಿಯೊಂದಿಗೆ ಆ ಗುಂಪಿನ ಭಾಗವಾಗಲು ಕಿಶೋರ್ ಅವರಿಗೆ ಪಕ್ಷ ಸೇರ್ಪಡೆಗೋಸ್ಕರ ಆಹ್ವಾನ ನೀಡಲಾಗಿತ್ತು. ಆದರೆ, ಅವರು ನಿರಾಕರಿಸಿದರು. ಪಕ್ಷಕ್ಕಾಗಿ ಅವರು ನೀಡಿರುವ ಸಲಹೆಗಳನ್ನು ನಾವು ಪ್ರಶಂಸಿಸುತ್ತೇವೆ’
ಹೀಗಂತ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ. ಪ್ರಶಾಂತ್ ಕಿಶೋರ್‌ರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಕೊಳ್ಳುವ ಸಂಬಂಧ ರಚನೆ ಮಾಡಲಾಗಿದ್ದ ಸಮಿತಿ ನಿನ್ನೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ವರದಿ ಸಲ್ಲಿಸಿತ್ತು. ಇದರಲ್ಲಿ ಪ್ರಶಾಂತ್ ಕಿಶೋರ್ ಪಕ್ಷ ಸೇರ್ಪಡೆ ಸಾಧಕ-ಬಾಧಕಗಳ ಕುರಿತು ಮಾಹಿತಿ ನೀಡಲಾಗಿತ್ತು. ಇದರ ಬೆನ್ನಲ್ಲೇ ಪ್ರಶಾಂತ್ ಕಿಶೋರ್ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.