CinemaDistricts

ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ: ಬೂದಿ ಮುಚ್ಚಿದ ಕೆಂಡದಂತಾದ ಜಿಲ್ಲಾಸ್ಪತ್ರೆ

ಬೀದರ್:‌ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಬೀದರ್‌ನ ಬ್ರಿಮ್ಸ್‌ ಆಸ್ಪತ್ರೆಯಲ್ಲಿ ನಡೆದಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪರಿಸ್ಥಿತಿ ಹದಗೆಟ್ಟಿರುವುದರಿಂದ ಪೊಲೀಸರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

ಅಸಲಿಗೆ ನಡೆದ ಘಟನೆ ಏನು..?

ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ 2020 ರಲ್ಲಿ ಕಾಂಗ್ರೆಸ್‌ ಮುಖಂಡ ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯ ಫಿರೋಜ್‌ ಖಾನ್‌, ಅರಬಾಜ್‌ಖಾನ್‌  ಟೀಂ ಹಾಗೂ ಮಹ್ಮದ್‌ ರೌಫ್‌, ಅಫಸರ್‌ ಖಾನ್‌ ಇನ್ನೊಂದು ಗ್ಯಾಂಗ್‌ ನಡುವೆ ವಾರ್‌ ನಡೆದಿತ್ತು. ಗಲಾಟೆ ಸಂಬಂಧ ಬೀದರ್‌ನ ಟೌನ್‌ ಠಾಣೆಯಲ್ಲಿ ಎರಡೂ ಕಡೆಯವರೂ ಕೇಸ್‌ ದಾಖಲಿಸಿದ್ರು. ಹಾಗಾಗಿ ವಿಚಾರಣೆ ನಡೆಸಲು ಪೊಲೀಸರು ಇಂದು ಎರಡು ಕಡೆಯವರಿಗೆ ಬರಲು ಹೇಳಿದ್ದಾರೆ. ಈ ನಡುವೆ ಎರಡೂ ಕಡೆಯವರು ಇಂದು ಮಧ್ಯಾಹ್ನ ಬಡಿದಾಡಿದ್ದಾರೆ. ಹೊಡೆದಾಟದಲ್ಲಿ ಗಾಯಾಳುಗಳು ಬೀದರ್‌ನ ಬ್ರಿಮ್ಸ್‌ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಈ ವಿಚಾರ ತಿಳಿದ  ಕಾಂಗ್ರೆಸ್‌ ಮುಖಂಡ ಫಿರೋಜ್‌ ಖಾನ್‌, ಬ್ರಿಮ್ಸ್‌ಗೆ ಮಧ್ಯಾಹ್ನ ಮೂರು ಗಂಟೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದ ಮಹ್ಮದ್‌ ರೌಫ್‌ ಹಾಗೂ ಅಫಸರ್‌ ಖಾನ್‌ರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಆಸ್ಪತ್ರೆಯಲ್ಲಿ ಕೈಗೆ ಸಿಕ್ಕ ವಸ್ತುಗಳಿಂದ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಗಂಭೀರ ಗಾಯಗೊಂಡಿರುವ ಮಹ್ಮದ್‌ ರೌಫ್‌ನನ್ನು ಹೈದರಾಬಾದ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಲಾಟೆ ವೇಳೆ ಕಾಂಗ್ರೆಸ್‌ ಮುಖಂಡನ ಕಡೆಯವರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅವರು ಬ್ರಿಮ್ಸ್‌ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಇವರ ಗಲಾಟೆಯಿಂದ ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದೆ. ರೋಗಿಗಳಿಗೆ ಚಿಕಿತ್ಸೆ ಸಿಗದೆ ಕೆಲ ಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು.

ಇದೀಗ ಬೀದರ್‌ನ ಬ್ರಿಮ್ಸ್‌ ಆಸ್ಪತ್ರೆ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಪೊಲೀಸರು ಸ್ಥಳದಲಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಘಟನೆ ಸಂಬಂಧ ನ್ಯೂಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post