BengaluruPolitics

ಶುಕ್ರವಾರ ವಿಪಕ್ಷ ನಾಯಕ ಆಯ್ಕೆ ನಡೆಯುತ್ತಾ..? ಕುಮಾರಸ್ವಾಮಿಯನ್ನು ವಿಪಕ್ಷ ನಾಯಕನನ್ನಾಗಿ ಮಾಡ್ತಾರಾ..?

ಬೆಂಗಳೂರು; ಕರ್ನಾಟಕದಲ್ಲಿ ಹೊಸ ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆಯುತ್ತಿದೆ. ಆದ್ರೆ ಇದುವರೆಗೂ ವಿಪಕ್ಷ ನಾಯಕನ ಆಯ್ಕೆ ಮಾಡಿಲ್ಲ. ಬಿಜೆಪಿ ಹೈಕಮಾಂಡ್‌ ವಿಪಕ್ಷ ನಾಯಕನನ್ನು ಆಯ್ಕೆ ಮಾಡುವುದಕ್ಕೆ ಮೀನಾಮೇಷ ಎಣಿಸುತ್ತಿತ್ತು. ವಿಪಕ್ಷ ನಾಯಕನಿಲ್ಲದೆ ಒಂದು ಅಧಿವೇಶನ ಕೂಡಾ ಮುಗಿದುಹೋಗಿದೆ. ಈಗ ಡಿಸೆಂಬರ್‌ 4 ರಿಂದ ಬೆಳಗಾವಿಯಲ್ಲಿ ಚಳಗಾಲದ ಅಧಿವೇಶನ ನಡೆಯಲಿದೆ. ಅದಕ್ಕಿಂತ ಮೊದಲು ವಿಪಕ್ಷ ನಾಯಕನ ಆಯ್ಕೆ ನಡೆಯುತ್ತಾ ಅನ್ನೋದರ ಬಗ್ಗೆ ಕುತೂಹಲ ಶುರುವಾಗಿದೆ. ಅಂದಹಾಗೆ, ಇತ್ತೀಚೆಗಷ್ಟೇ ರಾಜ್ಯ ಬಿಜೆಪಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಅವರ ಕಿರಿಯ ಪುತ್ರ ಬಿ.ವೈ.ವಿಜಯೇಂದ್ರ ಅವರು ಸದ್ಯ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ಬಿಜೆಪಿಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ನಡೆಯುತ್ತಿದೆ. ಇನ್ನು ನೂತನ ಅಧ್ಯಕ್ಷ ವಿಜಯೇಂದ್ರ ಅವರು, ಇದೇ ಶುಕ್ರವಾರ ಅಂದ್ರೆ ನವೆಂಬರ್‌ 17ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ವಿಪಕ್ಷ ನಾಯಕನ ಆಯ್ಕೆ ನಡೆಯಲಿದೆ ಎಂದು ಹೇಳುತ್ತಿದ್ದಾರೆ.

ಶುಕ್ರವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇದೆ. ಈ ಸಭೆಗೆ ಬಿಜೆಪಿ ಹೈಕಮಾಂಡ್‌ನಿಂದ ವೀಕ್ಷಕರು ಆಗಮಿಸಲಿದ್ದಾರೆ. ಈ ಸಭೆಯಲ್ಲಿ ವಿಪಕ್ಷ ನಾಯಕನ ಆಯ್ಕೆ ನಡೆಯುತ್ತೆ ಎಂದು ವಿಜಯೇಂದ್ರ ಹೇಳುತ್ತಿದ್ದಾರೆ. ಇನ್ನು ಬಿಜೆಪಿ ಹೈಕಮಾಂಡ್‌ಗೆ ಬಿಜೆಪಿಯಲ್ಲಿರುವ ಯಾರನ್ನೂ ವಿಪಕ್ಷ ನಾಯಕನ್ನಾಗಿ ಆಯ್ಕೆ ಮಾಡೋದು ಇಷ್ಟವಿಲ್ಲ ಎಂದು ಹೇಳಲಾಗುತ್ತಿದೆ. ಜೆಡಿಎಸ್‌ನ ಕುಮಾರಸ್ವಾಮಿಯವರನ್ನೇ ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಲು ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿವೆ. ಈಗಾಗಲೇ ಲೋಕಸಭಾ ಚುನಾವಣೆಗಾಗಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಹೊಂದಾಣಿಕೆ ಆಗಿದೆ. ಈ ಸಮಯದಲ್ಲೇ ವಿಪಕ್ಷ ನಾಯಕ ಸ್ಥಾನವನ್ನು ಕುಮಾರಸ್ವಾಮಿಯವರಿಗೆ ಬಿಟ್ಟು ಕೊಡುವ ಬಗ್ಗೆ ಮಾತುಕತೆಯಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನೊಂದೆಡೆ ಮಾಜಿ ಸಚಿವ ಅಶ್ವತ್ಥನಾರಾಯಣ, ಆರ್‌.ಅಶೋಕ್‌, ಬಸನಗೌಡ ಪಾಟೀಲ್‌ ಯತ್ನಾಳ್‌ ಸೇರಿದಂತೆ ಹಲವರು ವಿಪಕ್ಷ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಹಲವು ಹಿರಿಯರು ಆಕಾಂಕ್ಷಿಗಳಿದ್ದರು. ಆದ್ರೆ ಬಿಜೆಪಿ ಹೈಕಮಾಂಡ್‌ ಯುವ ನಾಯಕ ವಿಜಯೇಂದ್ರಗೆ ಮಣೆ ಹಾಕಿದೆ. ಹೀಗಾಗಿ ಈಗಾಗಲೇ ಬಿಜೆಪಿಯಲ್ಲಿನ ಹಲವರು ಅಸಮಾಧಾನಗೊಂಡಿದ್ದಾರೆ. ಇನ್ನು ವಿಪಕ್ಷ ನಾಯಕನ ಸ್ಥಾನ ಕೂಡಾ ಬಿಟ್ಟು ಹೋದರೆ ಮತ್ತಷ್ಟು ಅಸಮಾಧಾನ ಹೊರಬೀಳುವ ಸಾಧ್ಯತೆ ಇದೆ. ಈಗಾಗಲೇ ಅಶ್ವತ್ಥ್‌ ನಾರಾಯಣ ಅವರು ನಾನು ವಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಹೇಳಿದ್ದಾರೆ. ಹೀಗಾಗಿ ಒಂದು ವೇಳೆ ವಿಪಕ್ಷ ನಾಯಕನ ಸ್ಥಾನ ಕುಮಾರಸ್ವಾಮಿಗೆ ಬಿಟ್ಟುಕೊಟ್ಟರೆ ಅಸಮಾಧಾನ ಭುಗಿಲೇಳಬಹುದು. ಹೀಗಾಗಿ, ಬಿಜೆಪಿ ಹೈಕಮಾಂಡ್‌ ಚುನಾವಣೆ ಸಮಯದಲ್ಲಿ ಎಚ್ಚರಿಕೆ ನಡೆ ಇಡಬೇಕಾದ ಅನಿವಾರ್ಯತೆ ಇದೆ.

ಅಂದಹಾಗೆ, ಸದನದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷವನ್ನು ಸಮರ್ಥವಾಗಿ ಎದುರಿಸುವ ನಾಯಕ ಬಿಜೆಪಿಯಲ್ಲಿ ಇಲ್ಲ. ಇನ್ನೊಂದೆಡೆ, ಬಿಜೆಪಿಗೆ ಲಿಂಗಾಯತ ಮತಗಳಲ್ಲದೆ, ಒಕ್ಕಲಿಗರ ಮತಗಳೂ ಬೇಕಾಗಿದೆ. ಯಡಿಯೂರಪ್ಪ ಕುಟುಂಬವಿಲ್ಲದೆ ಲಿಂಗಾಯತ ಮತಗಳು ಹೇಗೆ ಕೈತಪ್ಪಿಹೋಗುತ್ತವೋ, ಅದೇ ರೀತಿ ದೇವೇವೇಗೌಡರ ಕುಟುಂಬವಿಲ್ಲದೇ ಒಕ್ಕಲಿಗರ ಮತಗಳನ್ನು ಪಡೆಯೋದಕ್ಕೆ ಸಾಧ್ಯವಿಲ್ಲ ಅನ್ನೋದು ಬಿಜೆಪಿ ಹೈಕಮಾಂಡ್‌ಗೆ ಗೊತ್ತಿದೆ. ಈ ಕಾರಣಕ್ಕಾಗಿಯೇ ಕುಮಾರಸ್ವಾಮಿಯವರಿಗೆ ವಿಪಕ್ಷ ನಾಯಕನ ಪಟ್ಟ ಕಟ್ಟಿ, ಆ ಮೂಲಕ ಒಕ್ಕಲಿಗ ಮತಗಳನ್ನು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೆಳೆಯುವ ಪ್ರಯತ್ನಕ್ಕೆ ಬಿಜೆಪಿ ಮುಂದಾಗಿದೆ.

ಇನ್ನು ಶುಕ್ರವಾರ ಬಿಜೆಪಿ ಹೈಕಮಾಂಡ್‌ನಿಂದ ವೀಕ್ಷಕರು ಬರಲಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ನಡೆಯುವ ವಿಷಯಗಳನ್ನು ಅವರು ಹೈಕಮಾಂಡ್‌ಗೆ ತಲುಪಿಸುತ್ತಾರೆ. ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಶಾಸಕರ ಮನಸ್ಸಿನಲ್ಲೇ ಏನಿದೆ ಎಂಬುದನ್ನು ತಿಳಿಯುತ್ತಾರೆ. ಅನಂತರ ವಿಪಕ್ಷ ನಾಯಕನ ಆಯ್ಕೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಶುಕ್ರವಾರ ನಡೆಯುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮಹತ್ವ ಪಡೆದುಕೊಂಡಿದೆ.

Share Post