BengaluruCrime

ಸ್ವಾಮೀಜಿ ಬಂಧನವಾಗಲಿ, ದೊಡ್ಡವರ ಹೆಸ್ರೆಲ್ಲಾ ಹೊರಬರುತ್ತೆ; ಚೈತ್ರಾ ಕುಂದಾಪುರ

ಬೆಂಗಳೂರು; ಉದ್ಯಮಿ ಗೋವಿಂದ ಬಾಬು ಪೂಜಾರಿಯಿಂದ 5 ಕೋಟಿ ರೂಪಾಯಿ ಪಡೆದು ವಂಚನೆ ಮಾಡಿರುವ ಪ್ರಕರಣದ ತನಿಖೆ ತೀವ್ರಗೊಂಡಿದೆ. ಎ೧ ಆರೋಪಿ ಚೈತ್ರಾ ಕುಂದಾಪುರ ಸೇರಿದಂತೆ ಬಂಧನವಾಗಿರುವ ಎಲ್ಲರನ್ನೂ ಹತ್ತು ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಸಿಸಿಬಿ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ. ಇಂದು ಬೆಳಗ್ಗೆ ಚೈತ್ರಾಳನ್ನು ಸಿಸಿಬಿ ಕಚೇರಿಗೆ ವಿಚಾರಣೆಗೆಂದು ಕರೆತರಲಾಗಿದೆ. ಈ ವೇಳೆ ಆಕೆ ಪೊಲೀಸ್‌ ವಾಹನದಿಂದ ಇಳಿಯುವಾಗ ಮಾತನಾಡಿದ ಮಾತುಗಳು ಕುತೂಹಲಕ್ಕೆ ಕಾರಣವಾಗಿದೆ. ಈ ಪ್ರಕರಣದ ಹಿಂದೆ ದೊಡ್ಡವರೆಲ್ಲಾ ಇದಾರಾ..? ಎಂಬುದರ ಬಗ್ಗೆ ಅನುಮಾನ ಮೂಡಿದೆ.

ಹೊಸಪೇಟೆ ಜಿಲ್ಲೆಯ ಹಿರೇ ಹಡಗಲಿಯ ಹಾಲುಸ್ವಾಮಿ ಮಠದ ಅಭಿನವ ಶ್ರೀ ಹಾಲುಶ್ರೀ ಸ್ವಾಮೀಜಿ ಕೂಡ ಈ ಪ್ರಕರಣದ ಆರೋಪಿಗಳಲ್ಲೊಬ್ಬರು. ಆದ್ರೆ ಅವರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಹುಡುಕಾಟ ಮುಂದುವರೆದಿದೆ. ಹೀಗಿರುವಾಗಲೇ ಚೈತ್ರಾ ಕುಂದಾಪುರ ನೀಡಿರುವ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ. ಯಾಕಂದ್ರೆ ಇಂದು ಬೆಳಗ್ಗೆ ಚೈತ್ರಾ ಮಹಿಳಾ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಬಂದಾಗ, ಮಾಧ್ಯಮಗಳ ಜೊತೆ ಮಾತನಾಡುತ್ತಾ, ಸ್ವಾಮೀಜಿ ಬಂದನವಾಗಲಿ ದೊಡ್ಡ ದೊಡ್ಡವರೆಲ್ಲಾ ಹೊರಕ್ಕೆ ಬರಲಿದ್ದಾರೆ ಎಂದು ಹೇಳಿದ್ದಾರೆ.

ಸ್ವಾಮೀಜಿ ಎ೩ ಆರೋಪಿಯಾಗಿದ್ದು, ಅವರು ಕೂಡಾ ಗೋವಿಂದ ಬಾಬು ಪೂಜಾರಿಯವರಿಂದ ಒಂದೂವರೆ ಕೋಟಿ ರೂಪಾಯಿ ಪಡೆದಿದ್ದರು ಎನ್ನಲಾಗಿದೆ. ಹೀಗಾಗಿ ಅವರ ಬಂಧನವಾದರೆ, ಪ್ರಕರಣಕ್ಕೆ ತಿರುವು ಸಿಗುವ ಸಾಧ್ಯತೆ ಇದೆ. ಇನ್ನೊಂದೆಡೆ ಗೋವಿಂದ ಬಾಬು ಪೂಜಾರಿಯವರು ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಸುವ ಗುತ್ತಿಗೆ ಪಡೆದಿದ್ದರು. ಅದರ ಬಿಲ್‌ ಇನ್ನೂ ಬಾಕಿ ಇದೆ. ಅದನ್ನ ಸರ್ಕಾರದಿಂದ ಪಡೆಯುವುದಕ್ಕಾಗಿ ನನ್ನ ವಿರುದ್ಧ ಈ ಆರೋಪ ಮಾಡಲಾಗಿದೆ ಎಂದು ಚೈತ್ರಾ ಆರೋಪ ಮಾಡಿದ್ದಾಳೆ. ಹೀಗಾಗಿ, ಕೇಸ್‌ ಯಾವ ತಿರುವು ಪಡೆಯಲಿದೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.

 

Share Post