ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕ; ಇದ್ರ ಹಿಂದಿನ ರಣತಂತ್ರವೇನು..?
ಬೆಂಗಳೂರು; ವಿಧಾನಸಭಾ ಚುನಾವಣೆ ಸೋಲಿನ ನಂತರ ರಾಜ್ಯದಲ್ಲಿ ಬಿಜೆಪಿ ಕಂಗೆಟ್ಟಿತ್ತು. ಕೂಡಲೇ ರಾಜ್ಯಾಧ್ಯಕ್ಷರನ್ನು ಬದಲಿಸಬೇಕಿದ್ದ ಬಿಜೆಪಿ ಹೈಕಮಾಂಡ್ ಕಾದುನೋಡುವ ತಂತ್ರ ಉಪಯೋಗಿಸಿತ್ತು.. ಈ ನಡುವೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಲವು ಹೆಸರುಗಳು ಬಂದು ಹೋದವು.. ಕೊನೆಗೆ ಅಚ್ಚರಿ ಎಂಬಂತೆ ಬಿಜೆಪಿ ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿದೆ… ಯಡಿಯೂರಪ್ಪ ಅವರನ್ನು ಬಿಟ್ಟು ಕರ್ನಾಟಕದಲ್ಲಿ ರಾಜಕೀಯ ಮಾಡೋದಕ್ಕೆ ಸಾಧ್ಯವಿಲ್ಲ ಎಂದು ಅರಿತಿರುವ ಬಿಜೆಪಿ ಹೈಕಮಾಂಡ್, ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ..
ಶೋಭಾ ಕರಂದ್ಲಾಜೆ, ಆರ್.ಅಶೋಕ್, ಅಶ್ವತ್ಥನಾರಾಯಣ, ವಿ.ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ಹೆಸರುಗಳು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿದ್ದವು. ಆದ್ರೆ ಬಿಜೆಪಿ ಹೈಕಮಾಂಡ್‌ಗೆ ಇವರಾರ ಮೇಲೂ ನಂಬಿಕೆ ಬಂದಿಲ್ಲ.. ಕೊನೆಗೆ ಹೈಕಮಾಂಡ್ ಬಿ.ವೈ.ವಿಜಯೇಂದ್ರ ಅವರಿಗೆ ಮಣೆ ಹಾಕಿದೆ… ಯಡಿಯೂರಪ್ಪನ್ನು ದೂರ ಇಟ್ಟು ರಾಜಕೀಯ ಮಾಡಿದರೆ ಲಿಂಗಾಯತರ ಮತಗಳು ದೂರವಾಗುತ್ತವೆ ಅನ್ನೋ ಸತ್ಯವನ್ನು ಬಿಜೆಪಿ ಹೈಕಮಾಂಡ್ ನಾಯಕರು ಅರಿತಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆ ಹತ್ತಿರದಲ್ಲಿರುವ ಈ ಸಂದರ್ಭದಲ್ಲಿ ವಿಜಯೇಂದ್ರಗೆ ಪಟ್ಟ ಕಟ್ಟಿ ರಾಜ್ಯದಲ್ಲಿ ನೆಲಕಚ್ಚಿರುವ ಬಿಜೆಪಿಗೆ ಚೈತನ್ಯ ತುಂಬಲು ಮುಂದಾಗಿದ್ದಾರೆ.
ಲಿಂಗಾಯ ಮತ ಬ್ಯಾಂಕ್ ಉಳಿಸಿಕೊಳ್ಳುವ ಯತ್ನ
ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಾಯಿತು. ಇನ್ನೊಂದೆಡೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್‌ಗೆ ಹೋದರು. ಇತ್ತ ಬಿಜೆಪಿ ಹೈಕಮಾಂಡ್ ಕೂಡಾ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾತಯರಿಗಿಂತ ಒಕ್ಕಲಿಗರನ್ನು ಒಲಿಸಿಕೊಳ್ಳಲು ಹೆಚ್ಚು ಸರ್ಕಸ್ ಮಾಡಿತ್ತು. ಆದ್ರೆ ಒಕ್ಕಲಿಗರ ಮತಗಳು ಬಿಜೆಪಿಗೆ ಅಷ್ಟೊಂದು ವರ್ಕೌಟ್ ಆಗೋದಿಲ್ಲ ಅನ್ನೋದು ಬಿಜೆಪಿಗೆ ಅರ್ಥವಾಗಿದೆ. ಹೀಗಾಗಿ ಲಿಂಗಾಯತರನ್ನೇ ಮತ್ತೆ ಒಲಿಸಿಕೊಳ್ಳಬೇಕಾಗಿ ಅನಿವಾರ್ಯತೆ ಬಿಜೆಪಿಗಿದೆ. ಲಿಂಗಾಯತರು ಮತ್ತೆ ಬಿಜೆಪಿ ಕಡೆ ಮುಖ ಮಾಡಬೇಕು ಅಂದ್ರೆ, ಯಡಿಯೂರಪ್ಪ ಕುಟುಂಬದವರಿಗೇ ಪಟ್ಟ ಕಟ್ಟಬೇಕು ಅನ್ನೋದು ಬಿಜೆಪಿ ಹೈಕಮಾಂಡ್‌ಗೆ ಅರ್ಥವಾಗಿದೆ. ಹೀಗಾಗಿ ವಿಜಯೇಂದ್ರಗೆ ಮಣೆ ಹಾಕಿದೆ.
ಯಡಿಯೂರಪ್ಪರನ್ನು ಕಡೆಗಣಿಸಿಲ್ಲ ಎಂಬ ಸಂದೇಶ
ವಯಸ್ಸಿನ ಕಾರಣ ನೀಡಿ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದಾಗ, ಅವರನ್ನು ಬಿಜೆಪಿಯಲ್ಲಿ ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಲಿಂಗಾಯತ ಸಮುದಾಯ ಈ ಬಗ್ಗೆ ಹೆಚ್ಚು ಅಸಮಾಧಾನಗೊಂಡಿತ್ತು. ಈ ಕಾರಣಕ್ಕೋ ಏನೋ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚಿತ್ತು. ಇದ್ರಿಂದಾಗಿ ಲಿಂಗಾಯತ ಸಮುದಾಯ ದೊಡ್ಡ ಮಟ್ಟದಲ್ಲಿ ಬಿಜೆಪಿ ವಿರುದ್ಧ ಮುನಿಸಿಕೊಂಡಿದೆ ಅನ್ನೋದು ಸಾಬೀತಾಗಿತ್ತು. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಲಿಂಗಾಯತರನ್ನು ಒಲಿಸಿಕೊಳ್ಳುವ ಅನಿವಾರ್ಯತೆ ಬಿಜೆಪಿಗಿದೆ. ಹೀಗಾಗಿ, ವಿಜಯೇಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಯುವಕರನ್ನು ಸೆಳೆಯುವ ಯತ್ನ
2023ರ ವಿಧಾನಸಭಾ ಚುನಾವಣೆಗೂ ಮುನ್ನ ಪ್ರವೀಣ್ ನೆಟ್ಟಾರು, ಶಿವಮೊಗ್ಗದ ಶರತ್ ಹತ್ಯೆ ಪ್ರಕರಣ ಹೀಗೆ ಹಲವು ಘಟನೆಗಳು ಜರುಗಿದ್ದವು. ಈ ಘಟನೆಗಳಿಂದ ಬಿಜೆಪಿ ಯುವ ಕಾರ್ಯಕರ್ತರು ಹೆಚ್ಚು ಆತಂಕ ವ್ಯಕ್ತಪಡಿಸಿದ್ದರು. ಬಿಜೆಪಿಗೆ ರಾಜೀನಾಮೆ ನೀಡುವ ಹಂತಕ್ಕೂ ಹೋಗಿದ್ದರು.. ಇನ್ನು ಬಿಜೆಪಿಯಲ್ಲಿ ಜನಪ್ರಿಯ ಯುವ ನಾಯಕರು ಅಂತ ಇದ್ದರೆ ಅದು ವಿಜಯೇಂದ್ರ ಮಾತ್ರ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದರೆ, ಯುವಕರಿಗೆ ಆದ್ಯತೆ ಕೊಟ್ಟಂತೆಯೂ ಆಗುತ್ತದೆ. ಯುವ ಸಮುದಾಯವನ್ನು ಬಿಜೆಪಿಗೆ ಸೆಳೆದಂತೆಯೂ ಆಗುತ್ತದೆ ಎಂಬ ಲೆಕ್ಕಾಚಾರ ಬಿಜೆಪಿ ಹೈಕಮಾಂಡ್‌ನದ್ದು.
ಉಪಚುನಾವಣೆಗಳನ್ನು ಗೆಲ್ಲಿಸಿಕೊಟ್ಟಿದ್ದ ವಿಜಯೇಂದ್ರ
ವಿಜಯೇಂದ್ರ ಅವರು ಬಿಜೆಪಿ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದ. ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದ ಉಪ ಚುನಾವಣೆಗಳ ಸಂದರ್ಭದಲ್ಲಿ ವಿಜಯೇಂದ್ರ ಒಂದಷ್ಟು ಕ್ಷೇತ್ರಗಳ ಉಸ್ತುವಾರಿ ನೀಡಲಾಗಿತ್ತು. ಆ ಕ್ಷೇತ್ರಗಳಲ್ಲಿ ವಿಜಯೇಂದ್ರ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರು. ಬಿಜೆಪಿ ಅಸ್ತಿತ್ವದಲ್ಲೇ ಇಲ್ಲದ ಅಂತಹ ಕ್ಷೇತ್ರಗಳಲ್ಲಿ ಯುವಕರನ್ನು ಹುರಿದುಂಬಿಸಿ ಪಕ್ಷ ಗೆಲ್ಲುವಂತೆ ನೋಡಿಕೊಂಡಿದ್ದರು. ಈ ಕಾರಣಕ್ಕಾಗಿ ವಿಜಯೇಂದ್ರಗೆ ಅಧಿಕಾರ ಕೊಡಬೇಕು ಅನ್ನೋ ಕೂಗು ಮೊದಲಿನಿಂದಲೂ ಇತ್ತು.