BengaluruPolitics

ಸಿದ್ದರಾಮಯ್ಯ ವಿರುದ್ಧ ವಿ.ಸೋಮಣ್ಣ, ಡಿಕೆಶಿ ವಿರುದ್ಧ ಆರ್‌.ಅಶೋಕ್‌; ಏನಿದು ಬಿಜೆಪಿ ಗೇಮ್‌ ಪ್ಲ್ಯಾನ್‌..?

ಬೆಂಗಳೂರು; ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರನ್ನು ಅವರ ಕ್ಷೇತ್ರಗಳಲ್ಲೇ ಕಟ್ಟಿ ಹಾಕಲು ಬಿಜೆಪಿ ಮೆಗಾ ಪ್ಲ್ಯಾನ್‌ ಮಾಡಿದೆ ಎನ್ನಲಾಗುತ್ತಿದೆ. ಇದಕ್ಕಾಗಿ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ವರುಣಾ ಕ್ಷೇತ್ರದಲ್ಲಿ ಸಚಿವ ವಿ.ಸೋಮಣ್ಣ ಹಾಗೂ ಡಿ.ಕೆ.ಶಿವಕುಮಾರ್‌ ಸ್ಪರ್ಧಿಸುವ ಕನಕಪುರ ಕ್ಷೇತ್ರದಲ್ಲಿ ಆರ್‌.ಅಶೋಕ್‌ ಅವರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಆರ್‌.ಅಶೋಕ್‌ ಅವರು ಪದ್ಮನಾಭನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಇನ್ನೊಂದೆಡೆ ವಿ.ಸೋಮಣ್ಣ ಅವರು ಗೋವಿಂದರಾಜ ನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಮೂಲ ಕ್ಷೇತ್ರದಲ್ಲಿ ಟಿಕೆಟ್‌ ನೀಡುವುದಲ್ಲದೇ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ವಿರುದ್ಧ ಸ್ಪರ್ಧಿಸುವಂತೆ ಹೈಕಮಾಂಡ್‌ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ವರುಣಾದಲ್ಲಿ ಲಿಂಗಾಯತರು ಹೆಚ್ಚಿದ್ದಾರೆ. ಹೀಗಾಗಿ ವಿ.ಸೋಮಣ್ಣ ಅವರನ್ನು ಕಣಕ್ಕಿಳಿಸಿದರೆ ಸಿದ್ದರಾಮಯ್ಯಗೆ ಕಷ್ಟವಾಗುತ್ತದೆ. ಟಫ್‌ ಫೈಟ್‌ ಇರುತ್ತದೆ. ಇತ್ತ ಒಕ್ಕಲಿಗರು ಹೆಚ್ಚಿರುವ ಕನಕಪುರದಲ್ಲಿ ಆರ್‌.ಅಶೋಕ್‌ರನ್ನು ಸ್ಪರ್ಧೆಗಿಳಿಸಿದರೆ ಡಿ.ಕೆ.ಶಿವಕುಮಾರ್‌ಗೆ ಫೈಟ್‌ ಕೊಡಬಹುದು. ಆಗ ಇಬ್ಬರೂ ನಾಯಕರು ರಾಜ್ಯಾದ್ಯಂತ ಸುತ್ತಾಡದೇ ತಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಗಮನ ಕೊಡುತ್ತಾರೆ. ಇದು ಬಿಜೆಪಿಗೆ ಲಾಭವಾಗುತ್ತೆ ಎಂಬ ಲೆಕ್ಕಾಚಾರ ಇದೆ.

ಈ ಬಗ್ಗೆ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಶೃಂಗೇರಿಯಲ್ಲಿ ಮಾತನಾಡಿದ ಅವರು, ಅಶೋಕ್‌ ಬರುವುದಾದರೆ ಸ್ವಾಗತ ಮಾಡುತ್ತೇನೆ. ಬಿಜೆಪಿಯವರ ನಿರ್ಧಾರಕ್ಕೆ ನನ್ನ ಸ್ವಾಗತವಿದೆ ಎಂದು ಹೇಳಿದ್ದಾರೆ. ಯಾರೇ ಬಂದರೂ ಎದುರಿಸಬೇಕು ಎಂದು ಇದೇ ಸಂದರ್ಭದಲ್ಲಿ ಡಿಕೆಶಿ ಹೇಳಿದ್ದಾರೆ.

Share Post