BengaluruPolitics

ನಿಲ್ಲದ ಮುಖ್ಯಮಂತ್ರಿ ಜಪ; ಸಿದ್ದರಾಮಯ್ಯ ವಿರುದ್ಧ ಎಐಸಿಸಿಗೆ ದೂರು

ಬೆಂಗಳೂರು; ಆಗಸ್ಟ್‌ ಮೂರರಂದು ದಾವಣಗೆರೆಯಲ್ಲಿ ಸಿದ್ದರಾಮಯಯ್ಯ ಅವರ ಜನ್ಮ ದಿನೋತ್ಸವ ಆಚರಿಸಲಾಯಿತು. ಈ ಸಮಾರಂಭದಲ್ಲಿ ಕಾಂಗ್ರೆಸ್‌ ವರಿಷ್ಠರು ಒಗ್ಗಟ್ಟಿನ ಮಂತ್ರ ಜಪಿಸಿದ್ದರು. ಸಿದ್ದರಾಮಯ್ಯ ಅವರನ್ನು ಡಿ.ಕೆ.ಶಿವಕುಮಾರ್‌ ಅಪ್ಪಿಕೊಳ್ಳುವಂತೆ ರಾಹುಲ್‌ ಗಾಂಧಿ ಸೂಚಿಸಿದ್ದರು. ಅಷ್ಟೇ ಅಲ್ಲ, ಮುಖ್ಯಮಂತ್ರಿ ಅಭ್ಯರ್ಥಿ ವಿಚಾರವನ್ನು ವೇದಿಕೆಯಲ್ಲಿ ಪ್ರಸ್ತಾಪಿಸದಂತೆಯೂ ನೋಡಿಕೊಂಡಿದ್ದರು. ಹೈಕಮಾಂಡ್‌ನಿಂದ ರಾಜ್ಯದ ನಾಯಕರಿಗೆ ಖಡಕ್‌ ಸೂಚನೆ ಬಂದಿದ್ದರಿಂದಾಗಿ ಯಾರೂ ಕೂಡಾ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರ ಅಂದಿನ ವೇದಿಕೆಯಲ್ಲಿ ಪ್ರಸ್ತಾಪವಾಗಲಿಲ್ಲ.

ಕಾಂಗ್ರೆಸ್‌ ಹೈಕಮಾಂಡ್‌ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬ ಸಂದೇಶದೊಂದಿಗೆ ಒಗ್ಗಟ್ಟಿನ ಮಂತ್ರವನ್ನು ಪಠಿಸುತ್ತಿದೆ. ಜೊತೆಗೆ ಯಾರೂ ಕೂಡಾ ಸಿಎಂ ಅಭ್ಯರ್ಥಿ ವಿಚಾರ ಪ್ರಸ್ತಾಪ ಮಾಡದಂತೆ ಖಡಕ್‌ ಸಂದೇಶವನ್ನೂ ರವಾನಿಸಿದೆ. ಹೀಗಿದ್ದರೂ ಕೂಡಾ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಲ ರಾಜ್ಯ ನಾಯಕರು ಕಾಂಗ್ರೆಸ್‌ ಹೈಕಮಾಂಡ್‌ಗೆ ದೂರು ಸಲ್ಲಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
­­­­­­­
ಕಳೆದ ಭಾನುವಾರ ಮೈಸೂರಿನಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ನನ್ನನ್ನು ಮುಖ್ಯಮಂತ್ರಿ ಮಾಡಿ, ನಿಮ್ಮ ಸಮುದಾಯ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಹೇಳಿದ್ದರು. ಈ ಮುಖ್ಯಮಂತ್ರಿ ವಿಚಾರವನ್ನು ಸಾರ್ವಜನಿಕವಾಗಿ ಚರ್ಚಿಸಬೇಡಿ ಎಂಬ ಹೈಕಮಾಂಡ್‌ ಸೂಚನೆಯನ್ನು ಮೀರಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲ ನಾಯಕರು ಸಿದ್ದರಾಮಯ್ಯ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲಾಗೆ ದೂರು ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಸಿದ್ದರಾಮೋತ್ಸವ ಮುಗಿದ ದಿನದಿಂದ ರಣದೀಪ್‌ ಸುರ್ಜೇವಾಲಾ ಅವರಿಗೆ ಸಿದ್ದರಾಮಯ್ಯ ವಿರುದ್ಧ ಎರಡು ಪತ್ರಗಳನ್ನು ಕಳುಹಿಸಲಾಗಿದೆ. ಆಗಸ್ಟ್‌ ಮೂರರಂದು ನಡೆದ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಸಮಾರಂಭದಲ್ಲಿ ಒಂದು ಕಡೆಯೂ ಕಾಂಗ್ರೆಸ್‌ ಪಕ್ಷದ ಚಿಹ್ನೆಯನ್ನು ಬಳಸಿರಲಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಕೆಲವರು ಸುರ್ಜೇವಾಲಾಗೆ ಈ ಬಗ್ಗೆ ದೂರು ಕೊಟ್ಟಿದ್ದರು. ಇನ್ನು ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಅವರು ನೀಡಿರುವ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಆಗಿದೆ. ಹೈಕಮಾಂಡ್‌ ಬಗ್ಗೆ ಸಮಜಾಯಿಷಿ ಕೇಳಿ ಜಮೀರ್‌ಗೆ ಶೋಕಾಸ್‌ ನೋಟಿಸ್‌ ನೀಡಿದೆ. ಆದ್ರೆ ಅದಕ್ಕೆ ಜಮೀರ್‌ ಇದುವರೆಗೂ ಉತ್ತರ ಕೊಟ್ಟಿಲ್ಲ. ಹೀಗಿರುವಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೈಸೂರಿನ ಸಮಾರಂಭದಲ್ಲಿ ಸಿಎಂ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಜೊತೆಗೆ ಇದೇ ವೇಳೆ ಅಲ್ಲಿ ಸೇರಿದ್ದ ಜನರು ಕೂಡಾ ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂಬ ಘೊಷಣೆಗಳನ್ನು ಕೂಗಿದಿದ್ದಾರೆ.

ಹೀಗೆ ಸಿದ್ದರಾಮಯ್ಯ ಅವರು ಎಲ್ಲೇ ಹೋದರೂ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಘೋಷಣೆಗಳು ಮೊಳಗುತ್ತಿವೆ. ಇದು ಪಕ್ಷದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಕೆಲವರ ವಾದ. ಈ ಹಿನ್ನೆಲೆಯಲ್ಲಿ ಕೆಲವರು ಹೈಕಮಾಂಡ್‌ಗೆ ದೂರು ನೀಡಿದ್ದಾರೆ. ಇನ್ನು ಹೈಕಮಾಂಡ್‌ಗೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಮುಖ್ಯ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಒಗ್ಗಟ್ಟು ಪ್ರದರ್ಶನ ಮಾಡಿ ಎಂದು ಹೇಳುತ್ತಿದೆ. ಸಾಮೂಹಿಕ ನಾಯಕತ್ವದಡಿ ಚುನಾವಣೆ ಎದುರಿಸಲು ಸಿದ್ಧತೆ ನಡೆದಿದೆ.

 

Share Post