ಅತಿವೃಷ್ಟಿಯಿಂದಾಗಿ ರಾಜ್ಯದಲ್ಲಿ 73 ಮಂದಿ ಸಾವು..!
ಬೆಂಗಳೂರು; ರಾಜ್ಯದಲ್ಲಿ ಭಾರಿ ಮಳೆ ತಂದ ಅವಾಂತರಿಂದಾಗಿ ಇದುವರೆಗೆ 73 ಮಂದಿ ಸಾವನ್ನಪ್ಪಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಳೆಯ ಕಾರಣದಿಂದಾಗಿ ವಿವಿಧ ಅವಘಡಗಳಲ್ಲಿ ಜನ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಭಾರಿ ಮಳೆಯಿಂದಾಗಿ ಹಲವು ಕಡೆ ಮನೆಗಳು ಕುಸಿದುಬಿದ್ದಿವೆ. ಮನೆಗಳ ಅವಶೇಷಗಳಡಿ ಸಿಲುಕಿ ಇದುವರೆಗೆ ಒಟ್ಟು 19 ಮಂದಿ ಸಾವನ್ನಪ್ಪಿದ್ದಾರೆ. ಪ್ರವಾಹಕ್ಕೆ ಸಿಲುಕಿ 24 ಮಂದಿ ಸತ್ತರೆ, ಸಿಡಿಲು ಬಡಿದು 15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಮರ ಬಿದ್ದು ಐದು ಮಂದಿ, ಭೂಕುಸಿತವುಂಟಾಗಿ 9 ಮಂದಿ ಹಾಗೂ ವಿದ್ಯುತ್ ಅವಘಡದಿಂದ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದಾರೆ.
ಮಳೆಹಾನಿಯಿಂದ ಸಂಕಷ್ಟಕ್ಕೊಳಗಾಗಿರುವವರಿಗೆ ಕಾಳಜಿ ಕಿಟ್ ನೀಡಲಾಗುವುದು ಎಂದು ಸಚಿವ ಅಶೋಕ್ ಹೇಳಿದ್ದಾರೆ. ಕಾಳಜಿ ಕಿಟ್‌ನಲ್ಲಿ ಹತ್ತು ಕೆಜಿ ಅಕ್ಕಿ, ಒಂದು ಕೆಜಿ ಬೇಳೆ, ಒಂದು ಕೆಜಿ ಉಪ್ಪು, ಒಂದು ಕೆಜಿ ಸಕ್ಕರೆ ಸೇರಿ ಒಟ್ಟು ಹನ್ನೊಂದು ಪದಾರ್ಥಗಳು ಇರಲಿವೆ. 14 ಜಿಲ್ಲೆಗಳು ಭಾರಿ ಮಳೆಯಿಂದಾಗಿ ತೊಂದರೆಗೊಳಗಾಗಿದ್ದಾರೆ. ನೂರಾರು ಜನ ಕಾಳಜಿ ಕೇಂದ್ರಗಳಲ್ಲಿದ್ದು, ಅಲ್ಲಿಂದ ಮನೆಗೆ ಹೋಗುವವರು ಹಾಗೂ ಮನೆ ಕಳೆದುಕೊಂಡವರಿಗೆ ಕಾಳಜಿ ಕಿಟ್ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಮಳೆಯಿಂದಾಗಿ ರಾಜ್ಯದಲ್ಲಿ ಒಟ್ಟು ೧೧,೭೬೮ ಕಿಮೀ ರಸ್ತೆ ಹಾಳಾಗಿದೆ. ೧೧೫೨ ಸೇತುವೆ, ಕಿರು ಸೇತುವೆಗಳು ಹಾನಿಗೊಳಗಾಗಿವೆ. ೪೫೬೧ ಶಾಲೆಗಳು, ೧೨೨ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ, ೨೨೪೯ ಅಂಗನವಾಡಿ ಕೇಂದ್ರಗಳಿಗೆ ಹಾನಿಯಾಗಿದೆ ಎಂದು ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದಾರೆ.