BengaluruCrime

ರಸ್ತೆ ಬದಿಯಲ್ಲಿ ಇಟ್ಟಿದ್ದ 1500 ಎಳನೀರನ್ನು ಕದ್ದೊಯ್ದ ಕಳ್ಳರು..!

ಬೆಂಗಳೂರು; ಕಳ್ಳರ ಗುಂಪೊಂದು ಟಾಟಾ ಏಸ್‌ನಲ್ಲಿ ಬಂದು ರಸ್ತೆ ಬದಿಯಲ್ಲಿ ಇಟ್ಟಿದ್ದ 1500 ಎಳನೀರನ್ನು ಕದ್ದೊಯ್ದಿದ್ದಾರೆ. ಬೆಂಗಳೂರಿನ ಜಯನಗರದ ರಾಷ್ಟ್ರೀಯ ಮೆಟ್ರೋ ಸ್ಟೇಷನ್‌ ಬಳಿ ಈ ಘಟನೆ ನಡೆದಿದೆ. ಆಗಸ್ಟ್‌ ಏಳರಂದು ಮುಂಜಾನೆ ಈ ಕಳ್ಳತನ ನಡೆದಿದ್ದು, ಇದೀಗ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಟಾಟಾ ಏಸ್‌ನಲ್ಲಿ ಬಂದಿದ್ದ ಕಳ್ಳರು, ಅದರ ನಂಬರ್‌ ಪ್ಲೇಟ್‌ ಮಸಿ ಬಳಿದಿದ್ದರು. ಹೀಗಾಗಿ ಅದು ಯಾರದ್ದೆಂದು ಹುಡುಕೋದು ಕಷ್ಟವಾಗಿತ್ತು. ಇನ್ನು ಕಳ್ಳತನವಾಗಿದ್ದರ ಬಗ್ಗೆ ಸಲೀಂ ಎಂಬುವವರು ಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು, ಗೌತಮ್, ರಘು ಹಾಗೂ ಮಣಿಕಂಠ ಎಂಬುವವರನ್ನು ಬಂಧಿಸಿದ್ದಾರೆ.

ಬಂಧಿತರು ಈ ಹಿಂದೆ ಕೂಡಾ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ರಘು ಎಂಬಾತನ ಮೇಲೆ ಕೊಲೆ ಯತ್ನ ಕೇಸ್‌ ಕೂಡಾ ದಾಖಲಾಗಿದೆ. ಅಂದಹಾಗೆ ಆರೋಪಿಗಳು ಎಳನೀರು ಕಳ್ಳತನ ಮಾಡುವಾಗ ಸಣ್ಣ ಸುಳಿವು ಕೂಡಾ ಸಿಗದಂತೆ ಮಾಡಿದ್ದರು. ಹೀಗಾಗಿ ಪೊಲೀಸರು ಆರೋಪಿಗಳನ್ನು ಹಿಡಿದಿದ್ದೇ ಒಂದು ಪವಾಡ.

ಪೊಲೀಸರು ಅರವತ್ತಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಕಳ್ಳರು ಉತ್ತರಹಳ್ಳಿ ಬಳಿ ಟೀ ಕುಡಿದ ದೃಶ್ಯ ಸೆರೆಯಾಗಿದೆ. ಟೀ ಕುಡಿದು ಅವರು ಅಲ್ಲಿ ಗೂಗಲ್‌ ಪೇ ಮೂಲಕ ಹಣ ಪಾವತಿ ಮಾಡಿದ್ದಾರೆ. ಗೂಗಲ್‌ ಪೇ ನಂಬರ್‌ ಆಧಾರದ ಮೇಲೆ ಪೊಲೀಸರು ಆರೋಪಿಗಳ ಬೆನ್ನು ಹತ್ತಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

Share Post