BengaluruDistricts

ಧರ್ಮದ್ವೇಷಿಗಳಿಂದ ಅಪಪ್ರಚಾರ ನಡೆಯುತ್ತಿದೆ; ಶೃಂಗೇರಿ ಮಠದಿಂದ ಸ್ಪಷ್ಟನೆ

ಚಿಕ್ಕಮಗಳೂರು; ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಗೆ ನಾಲ್ಕು ಶಂಕರ ಮಠಗಳು ವಿರೋಧ ವ್ಯಕ್ತಪಡಿಸುತ್ತಿವೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದಕ್ಕೆ ಶೃಂಗೇರಿಯ ಶಾರದಾ ಪೀಠ ಸ್ಪಷ್ಟನೆ ಕೊಟ್ಟಿದೆ. ಶೃಂಗೇರಿ ಮಠದ ಪರವಾಗಿ ಆಡಳಿತಾಧಿಕಾರಿ ಗೌರಿಶಂಕರ್‌ ಅವರು ಜನವರಿ 8ರಂದು ಆಸ್ತಿಕ ಜನರೆಲ್ಲರ ಗಮನಕ್ಕೆ ಒಂದು ಮುಖ್ಯ ವಿಷಯ ಎಂಬುದಾಗಿ ಹೇಳಿ ಪ್ರಕಟಣೆ ಕೊಟ್ಟಿದ್ದರು. 

ಕೆಲವರು ಧರ್ಮದ್ವೇಷಿಗಳು ಇದನ್ನು ತಿರುಚಿ ಶೃಂಗೇರಿ ಶಾರದಾಪೀಠ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಫೋಟೋದ ಜೊತೆಗೆ ಶ್ರೀಗಳು ಪ್ರಾಣಪ್ರತಿಷ್ಠಾ ಕಾರ್ಯಕ್ರಮವನ್ನು ವಿರೋಧಿಸುತ್ತಿದ್ದಾರೆ  ಎಂಬರ್ಥದಲ್ಲಿ ಸಂದೇಶ ಹಾಕಿದ್ದಾರೆ. ಇದು ಧರ್ಮದ್ವೇಷಿಗಳು ಮಾಡುತ್ತಿರುವ ಅಪಪ್ರಚಾರ. ಶ್ರೀಗಳು ಅಂತಹ ಯಾವುದೇ ಹೇಳಿಕೆ ಕೊಟ್ಟಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಠದ ಮಾಧ್ಯಮ ಹೇಳಿಕೆಯಲ್ಲಿ ಏನಿದೆ?
ಆಸ್ತಿಕ ಜನರೆಲ್ಲರ ಗಮನಕ್ಕೆ ಒಂದು ಮುಖ್ಯವಾದ ವಿಷಯ. ಸುಮಾರು ಐದುನೂರು ವರ್ಷಗಳ ಸುದೀರ್ಘವಾದ ಹೋರಾಟದ ನಂತರ ಶ್ರೀರಾಮಚಂದ್ರನ ಅವತಾರ ಕ್ಷೇತ್ರವಾದ ಪವಿತ್ರ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನಿಗೆ ಭವ್ಯವಾದ ದೇವಸ್ಥಾನದ ನಿರ್ಮಾಣವು ನೆರವೇರಿ ಇದೇ ಶೋಭಕೃತ್ ಪುಷ್ಯ ಶುಕ್ಲ ದ್ವಾದಶಿಯಂದು ಪ್ರಾಣ ಪ್ರತಿಷ್ಠಾ ಮಹೋತ್ಸವವು ಅತ್ಯಂತ ವೈಭವೋಪೇತವಾಗಿ ಸಂಪನ್ನಗೊಳ್ಳಲಿದೆ. ಈ ವಿಷಯವು ಸಮಸ್ತ ಆಸ್ತಿಕಸ್ತೋಮಕ್ಕೂ ಅತ್ಯಂತಾನಂದದಾಯಕವಾಗಿದೆ.

ಆದರೆ ಇಂತಹ ಸಂದರ್ಭದಲ್ಲಿ ಕೆಲವರು ಧರ್ಮದ್ವೇಷಿಗಳು ಸಾಮಾಜಿಕ ಜಾಲತಾಣದಲ್ಲಿ “www.dainikjagran.com” ಎಂಬ ಹೆಸರನ್ನು ಉಪಯೋಗಿಸಿಕೊಂಡು ಶೃಂಗೇರಿ ಶಾರದಾಪೀಠದ ಪ್ರಸ್ತುತ ಅಧಿಪತಿಗಳಾದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಛಾಯಾಚಿತ್ರದ ಜೊತೆಗೆ ಶ್ರೀಗಳು ಈ ಪವಿತ್ರ ಪ್ರಾಣಪ್ರತಿಷ್ಠಾ ಮಹೋತ್ಸವವನ್ನು ವಿರೋಧಿಸುತ್ತಿದ್ದಾರೆ ಎಂಬ ಅರ್ಥವು ಬರುವ ಹಾಗೆ ಸಂದೇಶವನ್ನು ಹಾಕಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರು ಇಂತಹ ಯಾವುದೇ ಸಂದೇಶವನ್ನು ನೀಡಿರುವುದಿಲ್ಲ. ಇದು ಕೇವಲ ಧರ್ಮದ್ವೇಷಿಗಳಾದ ಕೆಲವರು ಮಾಡುತ್ತಿರುವ ಮಿಥ್ಯಾ ಪ್ರಚಾರವೇ ಸರಿ. ಆದ್ದರಿಂದ ಆಸ್ತಿಕ ಮಹಾಜನರು ಯಾವುದೇ ಕಾರಣಕ್ಕೆ ಇಂತಹ ಅಪಪ್ರಚಾರಗಳಿಗೆ ಬೆಲೆಯನ್ನು ಕೊಡಬಾರದು. ಹಾಗೆಯೇ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಅಧಿಕೃತವಾದ www.sringeri.net ಎಂಬ ವೆಬ್‌ಸೈಟಿನಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ವಿಷಯಗಳನ್ನು ಮಾತ್ರವೇ ಪ್ರಾಮಾಣಿಕವಾಗಿ ಪರಿಗಣಿಸಬೇಕೆಂದು ಈ ಮೂಲಕ ನಿವೇದಿಸುತ್ತಿದ್ದೇವೆ.

 

Share Post