ಸದನದಲ್ಲಿ ಪೆನ್‌ಡ್ರೈವ್ ಸದ್ದು; ಕುಮಾರಸ್ವಾಮಿ-ಜಾರ್ಜ್ ವಾಕ್ಸಮರ
ಬೆಂಗಳೂರು; ಮಾಜಿ ಸಿಎಂ ಕುಮಾರಸ್ವಾಮಿಯವರು ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಅದಕ್ಕೆ ಸಾಕ್ಷಿ ಈ ಪೆನ್‌ಡ್ರೈವ್‌ನಲ್ಲಿದೆ ಎಂದು ಹೇಳಿದ್ದರು. ಇದೀಗ ಈ ವಿಚಾರ ಸದನದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿಯವರು ಈ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಸಚಿವ ಕೆ.ಜೆ.ಜಾರ್ಜ್ ಕುಮಾರಸ್ವಾಮಿ ವಿರುದ್ಧ ಮುಗಿಬಿದ್ದರು. ನಿಮ್ಮ ಬಳಿ ಸಾಕ್ಷ್ಯ ಇದ್ದರೆ ಸ್ಪೀಕರ್ ಕೊಡಿ ಎಂದು ಹೇಳಿದರು.
ನೀವು ಪೆನ್‌ಡ್ರೈವ್ ಇದೆ ಎಂದು ಹೇಳುತ್ತೀರಿ. ಅದರಲ್ಲಿ ಸಾಕ್ಷ್ಯ ಇದೆ ಎನ್ನುತ್ತೀರಿ. ಹಾಗಿದ್ದರೆ ಅದನ್ನು ಸ್ಪೀಕರ್ ಕೈಗೆ ಕೊಡಿ. ಪೆನ್‌ಡ್ರೈವ್‌ನಲ್ಲಿನ ಸಾಕ್ಷ್ಯ ಸದನದಲ್ಲಿ ವೀಕ್ಷಣೆಗೆ ಅವಕಾಶ ಮಾಡಿಕೊಡಿ ಎಂದು ಆಗ್ರಹಿಸಿದರು. ಈ ವೇಳೆ ಮಧ್ಯೆಪ್ರವೇಶಿಸದ ಮಾಜಿ ಸಿಎಂ ಕುಮಾರಸ್ವಾಮಿ, ನಾನು ಸಾಕ್ಷ್ಯ ಕೊಡುತ್ತೇವೆ. ಆ ಸಚಿವರ ರಾಜೀನಾಮೆ ಕೊಡಿಸ್ತೀರಾ..? ಎಂದು ಸವಾಲು ಹಾಕಿದರು. ಇನ್ನು ಇದೇ ವೇಳೆ ನಾಗಮಂಗಲದಲ್ಲಿ ಕೆಎಸ್‌ಆರ್‌ಟಿಸಿ ನೌಕರನ ಆತ್ಮಹತ್ಯೆ ಯತ್ನದ ವಿಚಾರವಾಗಿಯೂ ಗಂಭೀರ ಚರ್ಚೆ ನಡೆಯಿತು. ಡೆತ್‌ನೋಟ್‌ನಲ್ಲಿ ಅಚಿವ ಚಲುವರಾಯಸ್ವಾಮಿ ಹೆಸರಿದೆ. ಅವರ ವಿರುದ್ಧ ಕ್ರಮ ಆಗಬೇಕು. ಎಫ್‌ಐಆರ್ ದಾಖಲಾಗಬೇಕು ಅಂತ ಕುಮಾರಸ್ವಾಮಿ ಆಗ್ರಹಿಸಿದರು. ಇದಕ್ಕೆ ಮಾಜಿ ಸಿಎಂ ಬೊಮ್ಮಾಯಿ ಕೂಡಾ ಧನಿಗೂಡಿಸಿದರು.