Bengaluru

ಕಾಂಗ್ರೆಸ್‌ನವರದ್ದು ಪಾದಯಾತ್ರೆ ಅಲ್ಲ..ಸುಳ್ಳಿನ ಜಾತ್ರೆ: ಬಿಜೆಪಿ ವ್ಯಂಗ್ಯ

ಬೆಂಗಳೂರು: ಕಾಂಗ್ರೆಸ್‌ನವರ ಮೇಕೆದಾಟು ಪಾದಯಾತ್ರೆ ವಿರುದ್ಧ ಬಿಜೆಪಿ ನಾಯಕರು ಕುಟುಕುತ್ತಲೇ ಇದ್ದಾರೆ. ಇದೆಲ್ಲ ಅವರ ಡ್ರಾಮಾ ಓಟಿಗಾಗಿ ಜನರ ಮೆಚ್ಚಿಸಲು ಸುಳ್ಳಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಹಲವಾರು ಬಾರಿ ಹೇಳಿದ್ದೂ ಉಂಟು. ನಮ್ಮನ್ನು ಬಂಧಿಸಲು ಇನ್ನೊಂದು ಜನ್ಮ ಎತ್ತಿ ಬರಬೇಕು ಎಂದು ಡಿಕೆಶಿ ಹಾಕಿರುವ ಸವಾಲಿಗೆ ಮುಂದುವರಿದು ಇಂದು ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ #ಸುಳ್ಳಿನ ಜಾತ್ರೆಯಡಿ ಕಾಂಗ್ರೆಸ್‌ ನಾಯಕರ ವಿರುದ್ಧ ಸಿಡಿದೆದ್ದಿದ್ದಾರೆ.

ಮಾನ್ಯ ಡಿಕೆಶಿ ಅವರೇ ತಾಕತ್ತಿದ್ದರೆ ನಮ್ಮನ್ನು ಬಂಧಿಸಿ ಎಂದು ಸವಾಲು ಹಾಕುವುದು ಬೇಡ. ಪ್ರಧಾನಿ ಮೋದಿಯೋ, ರಾಹುಲ್ ಗಾಂಧಿಯೋ ಎಂದು ಸಿದ್ದರಾಮಯ್ಯ ಪ್ರಶ್ನಿಸುವುದೂ ಬೇಡ. ನೀವಿಬ್ಬರೂ ಸೇರಿ ಸ್ಟ್ಯಾಲಿನ್ ಮನವೊಲಿಸಿ ಸುಪ್ರೀಂ‌ಕೋರ್ಟ್‌ನಲ್ಲಿ ಸಲ್ಲಿಕೆಯಾದ ದಾವೆ ವಾಪಾಸ್ ತೆಗಿಸಿ. ನಿಮ್ಮ ತಾಕತ್ತನ್ನು ಅಲ್ಲಿ ಪ್ರದರ್ಶಿಸಿ ಎಂದು ಸವಾಲೆಸೆದಿದ್ದಾರೆ.

ತಮಿಳುನಾಡಿನಲ್ಲಿ ಕಾಂಗ್ರೆಸ್‌ ಪಕ್ಷ ಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಹಾಗಾದರೆ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಬೇಕಿರುವುದು ಯಾರ ವಿರುದ್ಧ? ಡಿಕೆಶಿಯವರೇ, ಮೇಕೆದಾಟು ಈಗ ಸ್ಟ್ಯಾಲಿನ್ ಸರ್ಕಾರದ ಅಂಗಳದಲ್ಲಿದೆ. ನೀವು #ಸುಳ್ಳಿನಜಾತ್ರೆ ಮಾಡುವ ಬದಲು, ಅವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. 

ಮೇಕೆದಾಟು ಯೋಜನೆಗೆ ತಡೆ ಕೋರಿ ಯಾರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರೋ, ಆ ಸರ್ಕಾರದೊಂದಿಗೆ ತಮಿಳುನಾಡಿನಲ್ಲಿ‌ ಕಾಂಗ್ರೆಸ್ ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಮೈತ್ರಿಯಲ್ಲಿದೆ. ಸೋನಿಯಾ ಗಾಂಧಿ ಕುಮ್ಮಕ್ಕಿನಿಂದ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಯ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೇಕೆ? ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

 

Share Post